ಇ-ಸ್ವತ್ತು ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾ.ಪಂ ಮಟ್ಟದಲ್ಲಿ ಅಧಿಕಾರಿಗಳನ್ನು ಸಜ್ಜುಗೊಳಿಸಿ: ಪ್ರಿಯಾಂಕ್ ಖರ್ಗೆ

ರಾಜ್ಯ

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸುಮಾರು ಒಂದು ಕೋಟಿ ಆಸ್ತಿಗಳನ್ನು ಇ-ಸ್ವತ್ತು ತೆಕ್ಕೆಗೆ ತರುವ ಮೂಲಕ ಮನೆ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇ-ಸ್ವತ್ತು ಸಮರ್ಪಕ ಅನುಷ್ಠಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಈ ಸಂಬಂಧ ಹೊಸದಾಗಿ ಬಿಡುಗಡೆ ಮಾಡಿರುವ ನಿಯಮಾವಳಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನನ ಮಾಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ವ್ಯವಸ್ಥೆ ಮಾಡಲು ತಿಳಿಸಿದರು.

ರಾಜ್ಯದ ಲಕ್ಷಾಂತರ ಜನರು ಈ ಯೋಜನೆಯ ಲಾಭ ಪಡೆಯಲು ತವಕದಿಂದ ಕಾಯುತ್ತಿದ್ದಾರೆ. ಸಾರ್ವಜನಿಕರಿಗೆ ಸುಲಲಿತವಾಗಿ ಹಾಗೂ ಪಾರದರ್ಶಕವಾಗಿ ಇ-ಸ್ವತ್ತು ಪ್ರಯೋಜನ ದೊರೆಯುವಂತೆ ಸಿಬ್ಬಂದಿಯನ್ನು ಸಜ್ಜು ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೆರವನ್ನು ಪಡೆದು ಸ್ವತ್ತು ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಗ್ರಾಮ ಪಂಚಾಯತಿಗಳ ಸಂಪನ್ಮೂಲವನ್ನು ವೃದ್ಧಿಸುವ ಮೂಲಕ ಸ್ಥಳೀಯ ಸರ್ಕಾರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೂತನವಾಗಿ ಅನುಷ್ಠಾನಕ್ಕೆ ತಂದಿರುವ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್) ಅಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಭ್ಯವಿರುವ ಆಸ್ತಿಗಳನ್ನು ಪತ್ತೆ ಮಾಡಬೇಕು. ಅಂತಹ ಸ್ಥಳದಲ್ಲಿ ಪಂಚಾಯತಿಗಳಿಗೆ ಶಾಶ್ವತ ಆದಾಯ ತಂದುಕೊಡುವ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರವಾಸಿ ತಾಣಗಳು ಹಾಗೂ ಯಾತ್ರಾಸ್ಥಳಗಳ ಸಮೀಪ ಲಭ್ಯವಿರುವ ಗ್ರಾಮ ಪಂಚಾಯತಿ ಆಸ್ತಿಗಳಲ್ಲಿ ಸಂಪನ್ಮೂಲ ಹೆಚ್ಚಿಸುವ ಯೋಜನೆಗಳನ್ನು ರೂಪಿಸಿದ್ದಲ್ಲಿ ಸರ್ಕಾರ ಅನುದಾನ ನೀಡಲಿದೆ ಎಂದು ಪ್ರಕಟಿಸಿದರು.

ಕೆಲವು ಜಿಲ್ಲೆಗಳಲ್ಲಿ ಆಸ್ತಿತೆರಿಗೆ ಸಂಗ್ರಹಿಸುವಲ್ಲಿ ಪ್ರಗತಿ ಕುಂಠಿತವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ತೆರಿಗೆ ವಸೂಲಾತಿಗೆ ಆದ್ಯತೆ ನೀಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚನೆ ನೀಡಲು ಹಾಗೂ ಸಭೆ, ವಿಮರ್ಶೆ, ಸ್ಥಳ ಪರೀಕ್ಷೆ ಮೂಲಕ ಆದ್ಯ ಗಮನ ಹರಿಸಲು ತಾ.ಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ವಿಡಿಯೋ ಸಂವಾದ ಸಭೆಯಲ್ಲಿ ಸೂಚನೆ ನೀಡಿರುವಂತೆ ಕಾರ್ಯಕ್ರಮ ಯಶಸ್ಸಿಗೆ ಕ್ರಮ ಕೈಗೊಂಡು, ಗ್ರಾಮ ಪಂಚಾಯತಿಗಳನ್ನು ದತ್ತು ತೆಗೆದುಕೊಂಡು ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರು ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳಿ. ಮೇಜಿನಿಂದ ಮೇಜಿಗೆ ಪತ್ರ ರವಾನೆಯಾದ ಮಾತ್ರಕ್ಕೆ ಸಾರ್ವಜನಿಕರ ಸಮಸ್ಯೆ ಬಗೆಹರಿಯುವುದಿಲ್ಲ, ಅವರ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ, ಕೆಳಹಂತದ ಅಧಿಕಾರಿಗಳಿಗೆ ಕಳುಹಿಸಿದ ದೂರುಗಳ ಸ್ಥಿತಿ ಗತಿಗಳ ಬಗ್ಗೆ ವಿವರ ಪಡೆಯಿರಿ. ಸಮಸ್ಯೆ ಬಗೆಹರಿದ ನಂತರ ದೂರುದಾರರಿಗೆ ಉತ್ತರ ನೀಡುವ ಪರಿಪಾಠ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *