ಕಲಬುರಗಿ: ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಗುರಿಯನ್ನು ನಿರ್ಧರಿಸಿ, ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಸಿಬೇಕು. ಕೀಳರಿಮೆ ತಾಳದೆ, ಧನಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್ ಹೇಳಿದರು.
ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿರುವ ಜೈನಾಪುರ ಫಂಕ್ಸನ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನರೇಂದ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಬೇಕು. ವಿದೇಶಿ ಸಂಸ್ಕೃತಿ ಅನುಕರಣೆ ಬೇಡ. ಸತತ ಅಧ್ಯಯನ, ನಿರಂತರವಾಗಿ ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ಪಡೆದು ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಕೆ.ಖಣದಾಳ ಮಾತನಾಡಿ, ವಿದ್ಯಾರ್ಥಿಗಳು ಶೃದ್ಧೆಯಿಂದ ಅಧ್ಯಯನ ಮಾಡಬೇಕು. ತುಳಿಯುವವರ ನಡುವೆ, ಏಳುವವರಾಗಿರಿ. ಉತ್ತಮ ಫಲಿತಾಂಶ ಪಡೆದು ಪಾಲಕರಿಗೆ, ಶಿಕ್ಷಕರಿಗೆ, ಸಂಸ್ಥೆಗೆ ಹೆಸರು ತರುವ ಕೆಲಸ ಮಾಡಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಇದನ್ನು ಅರಿತು ಜವಬ್ದಾರಿಯಿಂದ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಬದುಕು ಕಟ್ಟಿಕೊಡಬೇಕಾದದ್ದು ಅಗತ್ಯವಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿ.ಗುತ್ತೇದಾರ, ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಉದ್ಯಮಿ ಗುರು ತಳವಾರ ಜೈನಾಪುರ, ಯಡ್ರಾಮಿ ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡೂರ, ಕಾಲೇಜಿನ ಪ್ರಾಚಾರ್ಯ ದೇವಣ್ಣಗೌಡ ಪಾಟೀಲ ಹಂದನೂರ, ಗೌನಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಮೃತ ಮಾಲಿಪಾಟೀಲ, ಗಂವ್ಹಾರ ತ್ರವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ರೆಡ್ಡಿ, ಕೂಡಿ ದರ್ಗಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುಭಾಷ, ಉಪನ್ಯಾಸಕರಾದ ಮಲ್ಲಿಕಾರ್ಜುನ ಭಾಸಗಿ, ರಾಯಣ್ಣ ಕಟ್ಟಿಮನಿ, ನಿ ಪಟೇಲ್, ಕಲ್ಪನಾ ರೆಡ್ಡಿ, ವಿರೇಶ ಗೋಗಿ, ಶಾಂತಕುಮಾರ ಕುರಡೇಕರ್, ಶಿವಾನಂದ ಬಡಿಗೇರ, ಆಶಾರಾಣಿ ಹವಲ್ದಾರ, ಬಸವರಾಜ ಕೆ.ಪಾಟೀಲ ಹಾಗೂ ವಿದ್ಯಾರ್ಥಿಗಳು, ಪಾಲಕ-ಪೋಷಕರು ಇದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.