ಕಲಬುರಗಿ: ಮಾನವನ ದೇಹದ ಪ್ರಮುಖ ಭಾಗವಾದ ಕಿಡ್ನಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತದೆ. ನಿರಂತರ ಆಯಾಸ, ನಿದ್ರೆಯ ತೊಂದರೆ, ಒಣಗಿದ ಚರ್ಮ, ಮೂತ್ರದಲ್ಲಿ ಉರಿಯೂತ ಮತ್ತು ರಕ್ತಪಾತ, ಸ್ನಾಯು ಸೆಳೆತದಂತಹ ಲಕ್ಷಣಗಳು ಕಿಡ್ನಿಯ ತೊಂದರೆಯನ್ನು ಸೂಚಿಸುತ್ತವೆ. ಆಗ ನಿರ್ಲಕ್ಷ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕಿಡ್ನಿಯನ್ನು ರಕ್ಷಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಸಲಹೆ ನೀಡಿದರು.
ಶೇಖರೋಜಾ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಕಿಡ್ನಿ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ರಕ್ತದಲ್ಲಿ ಸಕ್ಕರೆ ಪ್ರಮಾಣ ನಿರ್ವಹಣೆ, ರಕ್ತದ ಒತ್ತಡ ನಿರ್ವಹಣೆ, ಸೂಕ್ತ ತೂಕ ಕಾಪಾಡಿಕೊಳ್ಳುವುದು, ಸಮತೋಲಿತ ಆಹಾರದ ಸೇವನೆ, ಯತೇಚ್ಛವಾಗಿ ನೀರು ಕುಡಿಯುವುದು,ಉಪ್ಪು, ಹುಳಿ, ಖಾರದ ಸೇವನೆ ಕಡಿಮೆಗೊಳಿಸುವುದು, ಆಲ್ಕೋಹಾಲ್, ಧೂಮಪಾನ ಸೇವಿಸದಿರುವುದು, ನಿಯಮಿತ ವ್ಯಾಯಾಮ ಮಾಡುವುದು, ಒತ್ತಡ ರಹಿತ ಜೀವನ ಪದ್ದತಿ ಅಳವಡಿಕೆ ಅಂತಹ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಿಡ್ನಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಸಂಗೀತಾ ಡಿ.ಜಾಧವ, ನೀತಾ ಆರ್. ಜಾಧವ, ಸುಲೋಚನಾ ಕುಂಬಾರ, ನಾಗಮ್ಮ ಚಿಂಚೋಳಿ ಸೇರಿದಂತೆ ಅನೇಕರು ಇದ್ದರು.