ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅರಿವು ಕೇಂದ್ರಗಳಲ್ಲಿ, ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಓದುವ ಬೆಳಕು ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ .
ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಶಾಲಾ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ. ನವೆಂಬರ್ 14 ರ ಮಕ್ಕಳ ದಿನಾಚರಣೆ ಹಾಗೂ ನವೆಂಬರ್ 20 ರ ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ನವೆಂಬರ್ 14ರ ಮಕ್ಕಳ ದಿನಾಚರಣೆ ವಿಶೇಷವಾಗಿ ಆಚರಿಸಲಾಗುವದು, ಈ ನಿಟ್ಟಿನಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯ ಸ್ಥಳೀಯ ಸ್ವಯಂ ಆಡಳಿತ ಘಟಕವಾದ ಗ್ರಾಮ ಪಂಚಾಯತಿಗೆ 9 ಮತ್ತು 10ನೇ ತರಗತಿಯ 25 ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಪ್ರವಾಸ ಕೈಗೊಂಡು ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗುವದು ಮತ್ತು “ಮಕ್ಕಳ ಪಂಚಾಯತ್” ಅರಿವಿನ ಹಬ್ಬ ಆಯೋಜಿಸಲು ಉದ್ದೇಶಿಸಲಾಗಿದೆ.
ಮಕ್ಕಳ ಪಂಚಾಯತ್ ಅರಿವಿನ ಹಬ್ಬದ ರೂಪುರೇಷೆಗಳು ಈ ಕೆಳಗಿನಂತಿವೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮ ಪಂಚಾಯತಿಯ ಪ್ರದೇಶದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಗ್ರಾಮ ಪಂಚಾಯತಿ ಒದಗಿಸುತ್ತಿರುವ ಸೇವೆಗಳ ಬಗ್ಗೆ ವಿವರಿಸಲಾಗುವುದು ಮತ್ತು ಅರಿವು ಮೂಡಿಸಲಾಗುವುದು.
✳️ ಮಕ್ಕಳಿಗೆ ಪ್ರಜಾಪ್ರಭುತ್ವ, 73ನೇ ಸಂವಿಧಾನ ತಿದ್ದುಪಡಿ, 3 ಹಂತದ ವಿಕೇಂದ್ರೀಕೃತ ವ್ಯವಸ್ಥೆ ಮತ್ತು ಸ್ಥಳೀಯ ಸ್ವಯಂ ಆಡಳಿತ ಘಟಕವಾಗಿ ಗ್ರಾಮ ಪಂಚಾಯತಿಯ ಕಾರ್ಯನಿರ್ವಹಣೆ ಬಗ್ಗೆ ವಿವರಿಸಲಾಗುವುದು.
✳️ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಯೋಜನೆಗಳ ಬಗ್ಗೆ ಪರಿಚಯ ಮಾಡಿಸಲಾಗುವುದು.
✳️ ಮಹತ್ವಾಕಾಂಕ್ಷಿ ಯೋಜನೆಗಳಾದ ಅರಿವು ಕೇಂದ್ರ, ಕೂಸಿನ ಮನೆ, ಸ್ವ ಸಹಾಯ ಸಂಘಗಳಿಂದ ಘನ ತ್ಯಾಜ್ಯ ನಿರ್ವಹಣೆ ಮತ್ತು ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುವುದು.
✳️ ಮಕ್ಕಳಿಗೆ ಲಘು ಉಪಹಾರ ನೀಡಲಾಗುವುದು.
✳️ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಆಯಾ ಜಿಲ್ಲೆಗಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿದೆ.
✳️ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನಗಳಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಆಯೋಜಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ.
ಗ್ರಾಮಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತದ ಬಗ್ಗೆ ಅರಿವಿರಬೇಕು, ಗ್ರಾಮ ಪಂಚಾಯತಿಗಳ ಆಶಯ, ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಅರಿವಿನ ಹಬ್ಬ ಯಶಸ್ವಿಯಾಗಲಿ. ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಅಂಗವಾಗಿ ಎಲ್ಲ ಮಕ್ಕಳಿಗೂ ಮಕ್ಕಳ ದಿನಚರಣೆಯ ಶುಭಾಶಯಗಳು ಕೋರುತ್ತೆನೆ.