ಬೆಂಗಳೂರು: ಯುವ ವೈದ್ಯೆಗೆ ನಗ್ನ ಫೋಟೋ ಕಳುಹಿಸುವಂತೆ ಕಿರುಕುಳ ನೀಡಿರುವದಲ್ಲದೆ, ನಿರಾಕರಣೆ ಮಾಡಿದ್ದಕ್ಕೆ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಗಂಭೀರ ಆರೋಪ ಪಿಎಸ್ಐ ವಿರುದ್ಧ ಕೇಳಿ ಬಂದಿದೆ.
ಬಸವನಗುಡಿ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಎಸ್ ಜೋಡಟ್ಟಿ ವಿರುದ್ದ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು ದೂರು ನೀಡಿದ್ದಾರೆ, ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ನೊಂದ ವೈದ್ಯೆ ಮನವಿ ಮಾಡಿದ್ದಾರೆ.
ಘಟನೆಯ ವಿವರ: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸಂತ್ರಸ್ತ ಯುವತಿ ಬಸವನಗುಡಿ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಎಸ್ ಜೋಡಟ್ಟಿಗೆ 2020ರಲ್ಲಿ ಫೇಸ್ಬುಕ್ ಮೂಲಕ ಪರಿಚಿತರಾಗಿದ್ದರು. ಆವಾಗ ಯುವತಿ MBBS ವ್ಯಾಸಂಗ ಮಾಡುತಿದ್ಡರು, 2020ರಲ್ಲಿ ರಾಜಕುಮಾರ ಎಸ್ ಜೋಡಟ್ಟಿ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆಯುತ್ತಿದ್ದರು. ಆವಾಗ ಇಬ್ಬರಿಗೂ ಸ್ನೇಹವಾಯಿತು, ಸ್ವಲ್ಪ ದಿನಗಳ ನಂತರ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು.
ರಾಜಕುಮಾರ ಎಸ್ ಜೋಡಟ್ಟಿ ಮತ್ತು ವೈದ್ಯೆ ಪರಸ್ಪರ ಪ್ರೀತಿಯಲ್ಲಿದ್ದಾಗ ವೈದ್ಯೆಯಿಂದ ಹಂತ ಹಂತವಾಗಿ 1.71 ಲಕ್ಷ ಹಣ ಪಡೆದಿದ್ದರು ಎಂಬ ಅರೋಪ ರಾಜಕುಮಾರ ಜೋಡಟ್ಟಿ ವಿರುದ್ಧ ಕೇಳಿ ಬಂದಿದೆ. ಅಲ್ಲದೆ ಇತ್ತೀಚೆಗೆ ನಗ್ನ ಪೊಟೋ ಕಳಿಸುವಂತೆ ಕಿರುಕುಳ ನೀಡಿದ್ದರು ಎನ್ನಲಾಗಿದೆ, ಇದನ್ನು ನಿರಾಕರಿಸಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಅಷ್ಟು ಮಾತ್ರವಲ್ಲದೆ, ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
