ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಹಜರತ್ ಸೈಯದ್ ಪೀರ್ ದರ್ಗಾವನ್ನು ಕಡಿಗೆಡಿಗಳು ಧ್ವಂಸಗೊಳಿಸಿದ್ದಾರೆ.
ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಮಜಾರ್ (ಸಮಾಧಿ) ಕಿತ್ತು ಹಾಕಿದ ಕಿಡಿಗೇಡಿಗಳು, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ.
ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ, ಗುರುವಾರ ಬೆಳಿಗ್ಗೆಯಿಂದ ನೂರಾರು ಜನರು ದರ್ಗಾಗೆ ಭೇಟಿ ನೀಡಿ , ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು, ದರ್ಗಾ ಮುಂಭಾಗದ ಹೊಲದಲ್ಲಿ ಇದ್ದ ಮತ್ತೊಂದು ಸಣ್ಣದಾದ ಮಜಾರ್ (ಸಮಾಧಿ) ಕಿತ್ತು ಹಾಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಭಾಗದ ಹಿಂದೂ – ಮುಸ್ಲಿಂ ರೈತರು ಜಮೀನುಗಳಿಗೆ ಹೋಗಿ ಬರುವಾಗ ದರ್ಶನ ಪಡೆಯುತ್ತಿದ್ದರು. ಆದರೆ ಈ ರೀತಿ ದರ್ಗಾವನ್ನೆ ಗುರಿಯಾಗಿಟ್ಟುಕೊಂಡು ಧ್ವಂಸಗೊಳಿಸಿರುವದು ಸರಿಯಲ್ಲ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ದರ್ಗಾದ ಉಸ್ತುವಾರಿ ಸೈಯದ್ ಅಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿಯುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಕೈಂ ಪಿಎಸ್‌ಐ ಚಂದ್ರಾಮಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.