ಸುದ್ದಿ ಸಂಗ್ರಹ ಆಳಂದ
ತಾಲೂಕಿನ ಗಡಿಗ್ರಾಮ ಅಳಂಗಾ ಕ್ರಾಸ್ ಬಳಿ ಸೋಮವಾರ ರಾತ್ರಿ ದರೋಡೆ ಯತ್ನ ನಡೆದಿದ್ದು, ಹಿಡಿಯಲು ಮುಂದಾದ ಗ್ರಾಮಸ್ಥರ ಮೇಲೆ ದರೋಡೆಕೋರರು ಗುಂಡು ಹಾರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಸವಕಲ್ಯಾಣ ತಾಲೂಕಿನ ದತ್ತಾತ್ರೇಯ ನೆಹರೂ ಮೂಲಗೆ ಮತ್ತು ಉಮರ್ಗಾದ ಗಣೇಶ ಮುಕುಂದ ಬಿರಾಜದಾರ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ತಲವಾರ್, ಚಾಕು, ಮೊಬೈಲ್ ಪೋನ್ ಮತ್ತು ಖಾರದ ಪುಡಿ ಜಪ್ತಿ ಮಾಡಿದ್ದಾರೆ.
ಘಟನೆಯ ವಿವರ: ಮುಖ್ಯ ರಸ್ತೆ ಮೇಲೆ ಸಾರ್ವಜನಿಕರನ್ನು ಬೆದರಿಸಿ ದರೋಡೆಗೆ ಸನ್ನದ್ಧರಾಗಿ ಕುಳಿತಿದ್ದ ಐವರನ್ನು ತಡೋಳಾ ಗ್ರಾಮಸ್ಥರು ಗುರುತಿಸಿ ಆಳಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದರೋಡೆಕೋರರನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದು ಪೊಲೀಸರ ವಶಕ್ಕೆ ನೀಡುವ ಯತ್ನ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ದರೋಡೆಕೋರರು ಗ್ರಾಮಸ್ಥರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಓಡಿ ಹೋಗುತ್ತಿದ್ದ ಒಬ್ಬ ದರೋಡೆಕೋರನನ್ನು ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ವ್ಯಕ್ತಿಯನ್ನು ಜಮಗಾ ತಾಂಡಾದ ಬಳಿಯ ಹೊಲದಲ್ಲಿ ಹಿಡಿಯಲಾಗಿದೆ. ಉಳಿದ ಮೂವರು ಪರಾರಿಯಾಗಿದ್ದಾರೆ.
ಬಂಧಿತರು ವಿಚಾರಣೆ ವೇಳೆ ಪರಾರಿಯಾದವರು ಮಹಾರಾಷ್ಟ್ರ ಮೂಲದ ಸಂಜಯ ಸಿಂಗ್ ಅಮರಸಿಂಹ ರಾಠೋಡ, ಕಾರ್ತಿಕ ಕಲ್ಲಪ್ಪ ಬೋಕಳೆ, ದತ್ತು ವೆಂಕಟ ಜಮಾದಾರ ಎಂದು ತಿಳಿಸಿದ್ದಾರೆ. ಸಂಜಯಸಿಂಗ್ ಹತ್ತಿರ ಅಕ್ರಮ ಪಿಸ್ತೂಲ್ ಇರುವುದಾಗಿಯೂ ತಿಳಿಸಿದ್ದಾರೆ. ಮುಖ್ಯರಸ್ತೆ ಮೇಲೆ ಸಂಚರಿಸುವ ವಾಹನ, ಬೈಕ್ ತಡೆದು ದರೋಡೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ.
ತಡೋಳಾ ಗ್ರಾಮಸ್ಥರು ವಹಿಸಿದ ಎಚ್ಚರಿಕೆಯಿಂದ ಅಂತರರಾಜ್ಯ ದರೋಡೆಕೋರರನ್ನು ಆಳಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.