ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕಟ್: ಶಿಕ್ಷಕಿ ವಜಾ

ಸುದ್ದಿ ಸಂಗ್ರಹ

ಗಾಂಧಿನಗರ: ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ಗುಜರಾತ್‌ನ ಖಾಸಗಿ ಶಾಲೆಯಲ್ಲಿ ನಡೆದಿದೆ.

ಮಂಗಳವಾರ ವಿದ್ಯಾರ್ಥಿನಿ ಶಾಲೆಗೆ ತೆರಳಿದಾಗ ತಲೆಗೂದಲಿಗೆ ಎಣ್ಣೆ ಹಚ್ಚಿರಲಿಲ್ಲ. ಇದನ್ನು ಕಂಡ ದೈಹಿಕ ಶಿಕ್ಷಕಿ ವಿದ್ಯಾರ್ಥಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ.

ಮನೆಗೆ ಮರಳಿದ ಮಗಳ ಕೂದಲು ಗಮನಿಸಿದಾಗ ಪೋಷಕರಿಗೆ ವಿಷಯ ತಿಳಿದಿದ್ದು, ಕೂಡಲೇ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಶಿಕ್ಷಕಿಯನ್ನು ವಜಾಗೊಳಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿನಿಯ ತಾಯಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಶಿಕ್ಷೆ ಕೊಡುತ್ತಾರೆ. ಒಂದು ಪುಸ್ತಕ ಮರೆತರೂ ಕೂಡ 100 ಬಸ್ಕಿ ಹೊಡೆಸುತ್ತಾರೆ. ಇದರಿಂದ ನಮ್ಮ ಮಕ್ಕಳು ಶಾಲೆಯೆಂದರೆ ಹೆದರುತ್ತಾರೆ. ಇದಕ್ಕೂ ಮುನ್ನ ಈ ಶಾಲೆಯಲ್ಲಿ ಇದೆ ರೀತಿಯ ವಿಷಯಗಳು ನಡೆದಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಶಿಕ್ಷಣ ಅಧಿಕಾರಿ ವಿಪುಲ್ ಮೆಹ್ತಾ ಮಾತನಾಡಿ, ಎರಡು ಶಾಲೆಗಳ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಎರಡು ಪ್ರಕರಣದಲ್ಲಿ ಮಕ್ಕಳ ಕೂದಲು ಕತ್ತರಿಸುವ ಬಗ್ಗೆ ಆರೋಪಿಸಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *