ಭಾರತೀಯ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರ ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಕ್ಕೆ ಸಾಕ್ಷಿಯಾಗಿದ್ದು ಕರ್ನಾಟಕ. ಸುಮಾರು 65 ವರ್ಷಗಳ ಅದ್ಭುತ ಸಂಗೀತ ಪಯಣದ ಬಳಿಕ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಅವರು ಮೈಸೂರಿನಲ್ಲಿ ಘೋಷಿಸಿದ್ದರು. ಇದೀಗ ಅವರು ಮೈಸೂರಿನಲ್ಲೆ ನಿಧನರಾಗಿರುವ ಹಿನ್ನೆಲೆಯಲ್ಲಿ, 2017ರಲ್ಲಿ ನಡೆದ ಆ ವಿದಾಯ ಸಂಗೀತ ಕಾರ್ಯಕ್ರಮವನ್ನು ಅಭಿಮಾನಿಗಳು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.
2017ರ ಅಕ್ಟೋಬರ್ 28ರಂದು ಮೈಸೂರಿನ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ “ಎಸ್ ಜಾನಕಿ ಮ್ಯೂಸಿಕಲ್ ನೈಟ್” ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾವಿರಾರು ಸಂಗೀತಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವೆ ಎಸ್ ಜಾನಕಿ ಅವರ ಸಾರ್ವಜನಿಕ ಗಾಯನದ ಕೊನೆಯ ವೇದಿಕೆಯಾಯಿತು.
ಆ ದಿನ ತಮ್ಮ ದೀರ್ಘ ಸಂಗೀತ ಪಯಣವನ್ನು ಸ್ಮರಿಸಿಕೊಂಡ ಜಾನಕಿ, ಇನ್ನು ಮುಂದೆ ಸಾರ್ವಜನಿಕ ವೇದಿಕೆಗಳಲ್ಲಿ ಹಾಡುವುದಿಲ್ಲ ಎಂದು ಭಾವುಕರಾಗಿ ಘೋಷಿಸಿದ್ದರು. ಅವರ ಈ ಮಾತು ಕೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದರು.
ಕಾರ್ಯಕ್ರಮದಲ್ಲಿ ಅವರು ತಮ್ಮ ಜನಪ್ರಿಯ ಕನ್ನಡ ಹಾಡುಗಳ ಮೂಲಕ ಸಂಗೀತಾಭಿಮಾನಿಗಳನ್ನು ರಂಜಿಸಿದರು. ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತಾವು ಹಾಡಿದ್ದ ಅನೇಕ ಅಮರ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ಭಾವನಾತ್ಮಕ ಕ್ಷಣಗಳಿಗೆ ಕರೆದೊಯ್ದರು. ಪ್ರತಿಯೊಂದು ಹಾಡಿಗೂ ಪ್ರೇಕ್ಷಕರಿಂದ ಭರ್ಜರಿ ಕರತಾಡನ ವ್ಯಕ್ತವಾಗಿತ್ತು.
ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಂತಿ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಎಸ್ ಜಾನಕಿ ಅವರನ್ನು ಸನ್ಮಾನಿಸಿದ್ದರು. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅಮೋಘ ಕೊಡುಗೆಯನ್ನು ಕೊಂಡಾಡಿ ಗೌರವ ಸಲ್ಲಿಸಲಾಗಿತ್ತು.
ಮೈಸೂರಿನಲ್ಲಿ ನಡೆದ ಆ ಕಾರ್ಯಕ್ರಮ ಕೇವಲ ಸಂಗೀತ ಕಚೇರಿಯಾಗಿರಲಿಲ್ಲ. ಅದು ಭಾರತೀಯ ಸಂಗೀತ ಲೋಕದ ಸುವರ್ಣ ಅಧ್ಯಾಯವೊಂದಕ್ಕೆ ತೆರೆ ಎಳೆದ ಭಾವನಾತ್ಮಕ ಕ್ಷಣವಾಗಿತ್ತು. ಸುಮಾರು ಆರು ದಶಕಗಳ ಕಾಲ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದ ಧ್ವನಿಯೊಂದು ಸಾರ್ವಜನಿಕ ವೇದಿಕೆಗೆ ವಿದಾಯ ಹೇಳಿದ ದಿನವಾಗಿ ಅದು ಇತಿಹಾಸದಲ್ಲಿ ದಾಖಲಾಗಿದೆ.
ಆ ಕಾರ್ಯಕ್ರಮದ ಬಳಿಕ ಎಸ್ ಜಾನಕಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಮತ್ತೆ ಯಾವುದೇ ಗಾಯನ ಕಾರ್ಯಕ್ರಮ ನೀಡಲಿಲ್ಲ. ಅವರ ಸಾವಿರಾರು ಹಾಡುಗಳು ಮಾತ್ರ ಇಂದಿಗೂ ಸಂಗೀತಪ್ರಿಯರ ಹೃದಯದಲ್ಲಿ ಸದಾ ಜೀವಂತವಾಗಿವೆ.
ಇಂದು ಎಸ್ ಜಾನಕಿ ಅವರು ಮೈಸೂರಿನಲ್ಲೆ ನಿಧನರಾಗಿರುವ ಹಿನ್ನೆಲೆಯಲ್ಲಿ, ಇದೆ ನಗರದಲ್ಲಿ ಅವರು ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದ ಆ ಸಂಜೆಯನ್ನು ಅಭಿಮಾನಿಗಳು ಭಾವುಕರಾಗಿ ಸ್ಮರಿಸುತ್ತಿದ್ದಾರೆ. ಅವರ ಕೊನೆಯ ಸಾರ್ವಜನಿಕ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಮೈಸೂರು ನಗರ, ಈಗ ಅವರ ಜೀವನದ ಕೊನೆಯ ಅಧ್ಯಾಯಕ್ಕೂ ಸಾಕ್ಷಿಯಾಗಿರುವುದು ಸಂಗೀತಾಭಿಮಾನಿಗಳನ್ನು ಮತ್ತಷ್ಟು ಮರುಗುವಂತೆ ಮಾಡಿದೆ.