ಬಸ್ಸಿನ ಸಮಸ್ಯೆ: ಬಸ್ ತಡೆದು ವಿದ್ಯಾರ್ಥಿಗಳು, ಪಾಲಕರ ಆಕ್ರೋಶ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಶಾಲಾ ಕಾಲೇಜಿಗೆ ಬಂದು ಹೋಗಲು ದಿನಾಲು ಸಮಸ್ಯೆಯಾಗುತ್ತಿದೆ ಎಂದು ತಾಲೂಕಿನ ದಂಡೋತಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯಿಂದ ಚಿತ್ತಾಪುರಕ್ಕೆ ತೆರಳುತ್ತಿದ್ದ ಬಸ್ ಪ್ರಯಾಣಿಕರಿಂದ ತುಂಬಿ ಬಂದು ಪರೀಕ್ಷೆಗೆ ಹಾಜರಾಗಲು ಬಸ್ಸಿಗಾಗಿ ಕಾದು ನಿಂತಿದ್ದ ವಿದ್ಯಾರ್ಥಿಗಳು ಬಸ್ ಹತ್ತಲಾಗದ ಪರಿಸ್ಥಿಯಿಂದ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಬಸ್ಸಿನಲ್ಲಿ ಎಷ್ಟು ವಿದ್ಯಾರ್ಥಿಗಳು ಬರಲು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳು ಹತ್ತಿರಿ. ಉಳಿದವರು ಬೇರೆ ಬಸ್ಸಿಗೆ ಬರಬೇಕು. ಬಸ್ಸಿನ ವ್ಯವಸ್ಥೆಗೆ ಘಟಕ ವ್ಯವಸ್ಥಾಪಕರನ್ನು ಕೇಳಿ ಎಂದು ಚಾಲಕ ಮತ್ತು ನಿರ್ವಹಕ ಹೇಳಿದರು.

ಅದಕ್ಕೆ ಒಪ್ಪದ ಗ್ರಾಮಸ್ಥರು ಘಟಕ ವ್ಯವಸ್ಥಾಪಕ ಸ್ಥಳಕ್ಕೆ ಬರಬೇಕು ಮತ್ತು ತಕ್ಷಣ ಮತ್ತೊಂದು ಬಸ್ ಕಳಿಸಲೇಬೇಕು ಎಂದು ಪಟ್ಟು ಹಿಡಿದರು.

ದಿನಾಲೂ ಇದೆ ಸಮಸ್ಯೆ ಇದೆ. ಎಷ್ಟು ಸಲ ಹೇಳಿದರೂ ಸಾರಿಗೆ ನಿಗಮದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ, ತೊಂದರೆಗೆ ಸ್ಪಂದಿಸುತ್ತಿಲ್ಲ. ಬೆಳಗ್ಗೆ ಬಸ್ಸಿನ ಸಮಸ್ಯೆಯಿಂದ ಶಾಲಾ ಕಾಲೇಜಿಗೆ ತಡವಾಗಿ ಹೋಗುವುದು, ಪರೀಕ್ಷೆಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ದಿನಾಲೂ ಚಿತ್ತಾಪುರಕ್ಕೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದರು.

ವಿದ್ಯಾರ್ಥಿಗಳು ಮತ್ತು ಪಾಲಕರು, ಗ್ರಾಮಸ್ಥರು ಬಸ್ಸಿನ ಮುಂದೆ ನಿಂತಿದ್ದರಿಂದ ಬಸ್ ಸಂಚಾರ ಬಂದ್ ಆಗಿ ಪ್ರಯಾಣಿಕರು ತೀವ್ರ ಪರದಾಡಿದರು. ಘಟಕದಿಂದ ಬಸ್ಸೊಂದು ಬಂದರೂ ಪಟ್ಟು ಸಡಿಲಿಸದ ವಿದ್ಯಾರ್ಥಿಗಳ ಪಾಲಕರು, ನಾಳೆ ಯಾವ ವ್ಯವಸ್ಥೆ ಮಾಡುತ್ತಾರೆ ಎಂಬ ಬಗ್ಗೆ ಅಧಿಕಾರಿ ಸ್ಥಳಕ್ಕೆ ಬಂದು ಹೇಳಬೇಕು ಎಂದು ಪಟ್ಟು ಹಿಡಿದು ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸಿದರು.

Leave a Reply

Your email address will not be published. Required fields are marked *