ಸುದ್ದಿ ಸಂಗ್ರಹ ವಾಡಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹಾಗೂ ದಲಿತ ಸಮುದಾಯದ ನಿಧಿ ದುರ್ಬಳಕೆಯನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆಯು ಸಾರ್ವಜನಿಕರ ವ್ಯಾಪಕ ಜನಬೆಂಬಲದೊಂದಿಗೆ ಯಶಸ್ವಿಯಾಗಿ 9ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವೇಣಿ ವೀರಾಪುರ ಕ್ರಾಸ್ ತಲುಪಿದ ಪಾದಯಾತ್ರೆಯ ರೂವಾರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ವಾಡಿ ನಗರದ ಬಿಜೆಪಿ ಮುಖಂಡರು ಭೇಟಿಯಾಗಿ ಹರ್ಷದಿಂದ ಅಭಿನಂದಿಸಿದರು.
ವಿಜಯೇಂದ್ರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ ಮುಖಂಡರು, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ವಾಡಿ ಬಿಜೆಪಿ ಘಟಕದ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ಪ್ರಮುಖ ಮುಖಂಡರಾದ ಭೀಮರಾವ ದೊರೆ, ಅರ್ಜುನ ಕಾಳೆಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.