ಕಲಬುರಗಿ: ಅಫಜಲಪುರ ತಾಲೂಕಿನ ಗಾಣಗಾಪುರದ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಅರ್ಚಕರಾದ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ದೇವಸ್ಥಾನದ ಗರ್ಭಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಗೌರಿ ಹುಣ್ಣಿಮೆಯಂದು ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಲೈನ್ ಬಿಡುವ ವಿಚಾರದಲ್ಲಿ ಇಬ್ಬರ ಮಧ್ಯೆ ನಾ ಮುಂದು – ತಾ ಮುಂದು ಎನ್ನುವ ವಿಚಾರಕ್ಕೆ ಜಗಳ ನಡೆದಿದೆ, ತಮ್ಮ ಕಡೆಯ ಭಕ್ತರಿಗೆ ಮೊದಲು ಬಿಡಬೇಕು, ಇಲ್ಲಾ ನಮ್ಮ ಕಡೆಯ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರದಲ್ಲಿ ವಾಗ್ವಾದ ಉಂಟಾಗಿ ಗಲಾಟೆ ತಾರಕಕ್ಕೇರಿದೆ, ಪರಿಸ್ಥಿತಿ ಕೈಮೀರಿ ದೇಗುಲದ ಒಳಗೆ ಭಕ್ತರ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ. ಇದು ದೇವಸ್ಥಾನದ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ಕುಟುಂಬಗಳ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಗಾಣಗಾಪುರದ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಇಬ್ಬರು ಅರ್ಚಕರು ಹೊಡೆದಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.