ಸುದ್ದಿ ಸಂಗ್ರಹ ಕಲಬುರಗಿ
ಸರ್ಕಾರದ ನಿರ್ದೇಶನದಂತೆ ಪ್ರಸಕ್ತ ಮೇ ಹಾಗೂ ಜೂನ್ ಎರಡು ತಿಂಗಳ ಆಹಾರ ಧಾನ್ಯಗಳನ್ನು ಮೇ ತಿಂಗಳಲ್ಲೆ ವಿತರಿಸಲಾಗುತ್ತಿದ್ದು, ಪಡಿತರದಾರರು ಎರಡು ಬಾರಿ ಬಯೋಮೆಟ್ರಿಕ್ ನೀಡಿ ಪಡಿತರ ಧಾನ್ಯ ಪಡೆದುಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ಪ್ರತಿ ಪಡಿತರ ಚೀಟಿಗೆ ಒಂದು ತಿಂಗಳಿಗೆ 35 ಕೆ.ಜಿಯಂತೆ ಒಟ್ಟು 70 ಕೆ.ಜಿ ಅಕ್ಕಿ ಮತ್ತು ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಯಂತೆ ಅಕ್ಕಿ ವಿತರಣೆ ಮಾಡಲಾತ್ತದೆ. ಮೇ ಮತ್ತು ಜೂನ್ ತಿಂಗಳ ಎರಡು ಬಾರಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ. ಒಂದು ಬಾರಿ ಬಯೋಮೆಟ್ರಿಕ್ ಗುರುತು ನೀಡಿದರೆ ಜೂನ್ ತಿಂಗಳ ಆಹಾರಧಾನ್ಯ ವಿತರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೇ 31ರೊಳಗಾಗಿ 2 ಬಾರಿ ಬಯೋಮೆಟ್ರಿಕ್ ನೀಡಿ ಎರಡು ತಿಂಗಳ ಆಹಾರಧಾನ್ಯ ಪಡೆಯುವಂತೆ ಕೋರಿದ್ದಾರೆ.
ನ್ಯಾಯ ಬೆಲೆ ಅಂಗಡಿಯು ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಸರ್ವ ಲಭ್ಯಗೊಳಿಸಿದ್ದರಿಂದ ಈ ಅವಧಿಯಲ್ಲಿ ಪಡಿತರ ಪಡೆಯಬಹುದಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ಯಾವುದೆ ರಾಜ್ಯದ ಪಡಿತರದಾರರು ಯಾವುದೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದು. ಕಡಿಮೆ ಪ್ರಮಾಣದಲ್ಲಿ ಆಹಾರಧಾನ್ಯ ವಿತರಣೆ ಮಾಡಿದಲ್ಲಿ, ಪಡಿತರ ನೀಡಲು ಹಣ ಕೇಳಿದಲ್ಲಿ ನಿಶುಲ್ಕ ಸಂಖ್ಯೆ 1967 ಅಥವಾ ತಹಸೀಲ್ದಾರರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಉಪನಿರ್ದೇಶಕರು ಹೇಳಿದ್ದಾರೆ.