ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಹೇರೂರ (ಕೆ) ಬೆಣ್ಣೆತೊರಾ ಜಲಾಶಯ ದಡದ ಸುಕ್ಷೇತ್ರ ಕನ್ನಡಗಿಯ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವ ಶ್ರಾವಣ ಮಾಸದ ಎರಡನೇ ಸೋಮವಾರ ಸಂಭ್ರಮ, ಸಡಗರದಿಂದ ಜರುಗಿತು.
‘ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬೆಳೆಗ್ಗೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಮಾಡಲಾಯಿತು. ದೇವಾಲಯದ ಆವರಣದಲ್ಲಿ ವಿವಿಧ ಹೂಗಳಿಂದ ರಚಿತವಾದ ದೊಡ್ಡ ಪ್ರಮಾಣದ ರಂಗೋಲಿ ಚಿತ್ತಾರ ಆಕರ್ಷಿತವಾಗಿತ್ತು.
ಅಲಂಕೃತಗೊಂಡ ಮಲ್ಲಿಕಾರ್ಜುನ ದೇವರ ಮೂರ್ತಿ ಒಳಗೊಂಡ ಪಲ್ಲಕ್ಕಿ ಉತ್ಸವವು ಡೋಲು, ಹಲಗೆ, ಪುರವಂತರ ಮೆರವಣಿಗೆ, ಭಜನೆ ಅಪಾರ ಭಕ್ತರ ಜಯ ಘೋಷಣೆಗಳೊಂದಿಗೆ ಸಂಜೆ ಸಡಗರದಿಂದ ಜರುಗಿತು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ನೆರವೇರಿತು.
ಹೇರೂರ (ಕೆ) ಭಜನಾ ತಂಡ ಹಾಗೂ ವಿವಿಧ ಗ್ರಾಮಗಳಿಂದ ಬರಮಾಡಿದ ಹಲಗೆ, ಡೊಳ್ಳು ಸೇರಿದಂತೆ ಇತರ ವಾದ್ಯಗಳು ಉತ್ಸವಕ್ಕೆ ಮೆರಗು ತಂದವು.
ಜಿಲ್ಲೆಯ ವಿವಿಧ ಕಡೆಯಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಮಹಿಳೆಯರು ವಿವಿಧ ಸಾಮಾನುಗಳು ಮತ್ತು ಮಕ್ಕಳ ಆಟಿಕೆ ಸಾಮಾಗ್ರಿಗಳು ಖರೀದಿಸಿ, ಸಂಭ್ರಮಿಸಿದರು. ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತ್ರತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಹಸ್ರಾರು ಭಕ್ತರು ವಾಹನಗಳೊಂದಿಗೆ ಆಗಮಿಸಿದ್ದರಿಂದ ದೇವಸ್ಥಾನದಿಂದ ಮಹಾಗಾಂವ- ಚಿಂಚೋಳಿಯ ಮುಖ್ಯ ರಸ್ತೆವರೆಗೆ 2.5 ಕಿ.ಮೀ ದಟ್ಟಣೆ ಕಂಡುಬಂದಿತು. ಉದ್ದನೆಯ ಸರದಿ ಸಾಲಿನಲ್ಲಿ ಭಕ್ತರು ಸಾಲಾಗಿ ನಿಂತು ಮಲ್ಲಿಕಾರ್ಜುನರ ದರ್ಶನ ಪಡೆದರು.
ಜಾತ್ರೆಯಲ್ಲಿ ದೇವಸ್ಥಾನ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕಿನ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.