ಮತದಾರರ ಪಟ್ಟಿಯಲ್ಲಿ 11 ವಿದೇಶಿಗರು: ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕದ ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಹೆಸರುಗಳು ಸೇರ್ಪಡೆಯಾಗಿರುವ ಶಂಕೆ ಇದೀಗ ಚುನಾವಣಾ ಅಧಿಕಾರಿಗಳ ಪರಿಶೀಲನೆಗೆ ಕಾರಣವಾಗಿದೆ. ಕರ್ನಾಟಕದ ಮತದಾರರ ಗುರುತಿನ ಚೀಟಿ ಹೊಂದಿರುವ 11 ವಿದೇಶಿ ಪ್ರಜೆಗಳ ವಿವರ ವಿದೇಶಿಗರ ನೋಂದಣಿ ಕಚೇರಿ (FRO) ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯಿಂದ ಕೇಳಿಬಂದಿದೆ. ಈ 11 ಜನರನ್ನು ತಮಿಳುನಾಡಿನಲ್ಲಿ ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ. ಅವರು ಶ್ರೀಲಂಕಾ ಮೂಲದವರು ಎನ್ನಲಾಗಿದ್ದು, ಅವರ ಸಂಪೂರ್ಣ ವಿವರ ಇನ್ನಷ್ಟೆ ಖಚಿತಪಡಿಸಿಕೊಳ್ಳಬೇಕಿದೆ. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳ ಮತದಾರರ ವಿವರ ಪರಿಶೀಲಿಸಲಾಗುತ್ತಿದೆ.

ಈ ವಿದೇಶಿ ಪ್ರಜೆಗಳ ಹೆಸರಿನಲ್ಲಿ ಇರುವ ಮತದಾರರ ಗುರುತಿನ ಚೀಟಿಗಳು ನಕಲಿಯೇ ಅಥವಾ ನೈಜವೇ ಎಂಬುದರ ಜೊತೆಗೆ, ಅವುಗಳನ್ನು ಹಿಂದೆ ಮತದಾನಕ್ಕೆ ಬಳಸಲಾಗಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮತದಾರರ ಮಾಹಿತಿಯಲ್ಲಿ ಅಸಂಗತತೆ ಅಥವಾ ಮ್ಯಾಪಿಂಗ್ ಆಗದ ದಾಖಲೆಗಳು ಕಂಡುಬಂದಿರುವ ಇತರ ಪ್ರಕರಣಗಳು ಪರಿಶೀಲಿಸಲಾಗುತ್ತಿದೆ.

ಗೋವಾ, ಅಂಡಮಾನ್, ಒಡಿಶಾ ಎಸ್​ಐಆರ್​ನಲ್ಲಿ ಕರ್ನಾಟಕದವರ ವಿವರ
ಇದೆ ವೇಳೆ ಗೋವಾ, ಅಂಡಮಾನ್ ಮತ್ತು ಒಡಿಶಾ ಸೇರಿದಂತೆ ಇತರ ರಾಜ್ಯಗಳ ಅಧಿಕಾರಿಗಳು ಕರ್ನಾಟಕದ CEO ಕಚೇರಿಯನ್ನು ಸಂಪರ್ಕಿಸಿ, ತಮ್ಮ ರಾಜ್ಯಗಳ ಮತದಾರರು ಎಸ್‌ಐಆರ್‌ ಅರ್ಜಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿರುವ ಪ್ರಕರಣಗಳ ಕುರಿತು ವಿವರ ಹಾಗೂ ಪರಿಶೀಲನೆ ಕೋರಿದ್ದಾರೆ.

ಅಸಹಜತೆ ಹೊಂದಿರುವ ಕೆಲವು ಮತದಾರರ ದಾಖಲೆಗಳ ಪರಿಶೀಲನೆ ವೇಳೆ ಪಾಸ್‌ಪೋರ್ಟ್‌ಗಳನ್ನು ಅಧಿಕಾರಿಗಳು ಕೇಳುತ್ತಿದ್ದಾರೆ. ಪಾಸ್‌ಪೋರ್ಟ್‌ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಅಗತ್ಯವಿದ್ದಲ್ಲಿ ಕೇಂದ್ರದ ಸಂಬಂಧಿತ ಸಚಿವಾಲಯಗಳ ಮೂಲಕ ಅದರ ನೈಜತೆ ಪರಿಶೀಲಿಸಲಾಗುತ್ತಿದೆ.

‘ನೋ-ಮ್ಯಾಪಿಂಗ್’ ವಿಭಾಗಕ್ಕೆ ಸೇರಿದ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿ (ERO) ಮತ್ತು ಜಿಲ್ಲಾ ಚುನಾವಣಾಧಿಕಾರಿ (DEO) ಹಂತದಲ್ಲಿ ಎರಡು ಬಾರಿ ಪರಿಶೀಲಿಸಲಾಗುತ್ತದೆ. ವ್ಯಕ್ತಿಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಮತದಾರರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಇಂತಹ ಅನುಮಾನಾಸ್ಪದ ದಾಖಲೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯಲಿದೆ. ಇದರಿಂದ ಮತದಾರರ ಪಟ್ಟಿ ಮತ್ತಷ್ಟು ಶುದ್ಧೀಕರಿಸುವ ಉದ್ದೇಶ ಚುನಾವಣಾ ಇಲಾಖೆ ಹೊಂದಿದೆ.

Leave a Reply

Your email address will not be published. Required fields are marked *