ಶಹಾಬಾದ್: ಭಂಕೂರಲ್ಲಿ ಅದ್ದೂರಿ ಕಾರಹುಣ್ಣಿಮೆ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಭಂಕೂರ ಗ್ರಾಮದ ಐತಿಹಾಸಿಕ ಕಾರಹುಣ್ಣಿಮೆ ಸೋಮವಾರ ಅದ್ದೂರಿಯಾಗಿ ನೆರವೇರಿತು.

ರವಿವಾರದಿಂದಲೆ ಹಬ್ಬದ ಸಿದ್ಧತೆಗಳು ಶುರುವಾಗಿದ್ದು, ಗ್ರಾಮದ ಕೆರೆಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬಂಡಿ ಗಂಗಸ್ಥಳಕ್ಕೆ ಹೋಗಿತ್ತು. ದೇವಿಯ ಮೂರ್ತಿಯನ್ನು ಹೊತ್ತ ಬಂಡಿ ಹೂಡಲು ರೈತರು ತಮ್ಮ ಎತ್ತುಗಳನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ನಿಂತಿರುತ್ತಾರೆ. ಗಾಡಿ ಹೋಗುತ್ತಿದ್ದಂತೆಯೇ ಒಂದು ಜೊತೆ ಎತ್ತುಗಳನ್ನು ನೊಗದಿಂದ ಬಿಚ್ಚಿ ಮತ್ತೊಂದು ಜೊತೆ ಎತ್ತುಗಳನ್ನು ಕಟ್ಟಿದರು. ನಂತರ ಹಣಮಂತ ದೇವರ ಗುಡಿ, ಅಂಕಲಮ್ಮಾ ಗುಡಿಗೆ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಅಲ್ಲಿ ಭಕ್ತರು ಸಾಲುಗಟ್ಟಿ ದರ್ಶನ ಪಡೆದರು. ನಂತರ ಕರಿ ಹರಿಯುವ ಶಾಸ್ತ್ರ ಪೂರೈಸಿದರು.

ಸಂಜೆ ಅಂಕಲಮ್ಮಾ ದೇವಿ ದೇವಸ್ಥಾನದ ಬಳಿ ಬಂಡಿಗೆ ವಿಶೇಷ ಪೂಜೆ, ಕುಂಭ ಪೂಜೆ ನಡೆಯಿತು. ಶಂಕರಗೌಡ ಮಜ್ಜಿಗಿ ಅವರು ಬಾರಕೋಲಿನೊಂದಿಗೆ ಬಂಡಿ ಏರಿದರು. ಆನಂದಮೂರ್ತಿ ಕುಲಕರ್ಣಿ ಖಡ್ಗದೊಂದಿಗೆ ಬಂಡಿ ಏರಿದರು, ಅಲ್ಲಿಂದ ಮೆರವಣಿಗೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಬಂಡಿಗೆ ಹೂಡಿದರು. ರಾತ್ರಿ 9 ಗಂಟೆಗೆ ಗ್ರಾಮದ ಮಹಾದ್ವಾರಕ್ಕೆ ಬೇವಿನ ಎಲೆಗಳಿಂದ ಕಟ್ಟಿದ ಕರಿಗೆ ಓಡುತ್ತಿರುವ ಬಂಡಿಯಿಂದ ಕುಲಕರ್ಣಿ ಖಡ್ಗದಿಂದ ಕರಿ ಹರಿಯುವದರೊಂದಿಗೆ ಜನಪದ ಜಾತ್ರೆ ಸಂಪನ್ನಗೊಂಡಿತು.

ನಿಜಾಮರ ಕಾಲದಿಂದಲೂ ಇಲ್ಲಿನ ಕಾರ ಹುಣ್ಣಿಮೆ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಇಲ್ಲಿನ ದೇವಸ್ಥಾನದ ಅರ್ಚಕರು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೆ, ಬ್ರಾಹ್ಮಣರು, ಲಿಂಗಾಯತರು, ಕೋಲಿ, ಕುರುಬ, ಹರಳಯ್ಯ, ಭೋವಿ ಸೇರಿದಂತೆ ವಿವಿಧ ಸಮಾಜಕ್ಕೆ ಒಂದೊಂದು ಬಗೆಯ ಜವಾಬ್ದಾರಿ (ಚಾಜ)ಗಳನ್ನು ಹಂಚಿಕೆ ಮಾಡಲಾಗಿರುತ್ತದೆ ಎನ್ನುತ್ತಾರೆ ಗ್ರಾಮದ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿಕಾಂತ ಕಂದಗೂಳ.

ಕೇರಿಯಮ್ಮ ದೇವಿಯ ಎರಡು ಮೂರ್ತಿಗಳಿದ್ದು, ಶತಮಾನದ ಹಿಂದೆ ದೇವಿಯ ಮೂರ್ತಿ ಕಳ್ಳತನವಾಗುತ್ತದೆ. ಹೀಗಾಗಿ ಗ್ರಾಮದ ಹಿರಿಯರು ಮತ್ತೊಂದು ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಕೆಲ ದಿನಗಳ ನಂತರ ಭಗ್ನಗೊಂಡ ಮೂರ್ತಿ ಪತ್ತೆಯಾಗುತ್ತದೆ. ಅದನ್ನೂ ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬರಲಾಗುತ್ತಿದೆ.

Leave a Reply

Your email address will not be published. Required fields are marked *