ಬಹಮನಿ ಇತಿಹಾಸ ಸಾರುವ ತಾಜ್ ಸುಲ್ತಾನಪುರದ ಗುಂಬಜ್‌ಗಳು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಬಹಮನಿ ಸಾಮ್ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿಯ ಇತಿಹಾಸ ಸಾರುವ ತಾಜ್ ಸುಲ್ತಾನಪುರದ ಗುಂಬಜ್‌ಗಳ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ-ಸಾಹಿತಿ ಮತ್ತು ಕಲಬುರಗಿ ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ತಾಜ್ ಸುಲ್ತಾನಪುರ ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ -53ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಲಬುರಗಿ ನೆಲವು ಪ್ರಾಚೀನ ಕಾಲದಲ್ಲಿ ಕಲ್ಲಿನ ನೆಲ ಕಲಂಬುರಗಿ, ಬಹಮನಿಯರ ಕಾಲದಲ್ಲಿ ಗುಲ್-ಎಲೆ, ಬರ್ಗಾ- ಹೂವು ಅಂದರೆ, ಎಲೆ-ಹೂವಿನಿಂದ ಕೂಡಿದ ಪ್ರದೇಶವೇ ಗುಲಬರ್ಗಾ ಎಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಸುಲ್ತಾನಪುರ ಗ್ರಾಮದ ಇತಿಹಾಸವು ಬಹಳ ರೋಚಕವಾಗಿದೆ. ಹೆಸರೇ ಸೂಚಿಸುವಂತೆ ಸುಲ್ತಾನ-ದೊರೆ, ರಾಜ ಮತ್ತು ರಾಣಿ ವಾಸವಿರುವ ಪುರವೇ ಸುಲ್ತಾನಪುರವಾಗಿದೆ. ನಗರದಲ್ಲಿರುವ ಬಹಮನಿಯರ ಕೋಟೆ, ಜಾಮಿಯಾ ಮಸೀದಿ, ಜಗತ್ತಿನಲ್ಲಿಯೇ ಅತಿ ಉದ್ದವಾದ ತೋಪು, ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ. ಸಾತ್ ಗುಂಬಜ್, ಚೋರ ಗುಂಬಜ್, ಸರ್ಕಾರಿ ಆಸ್ಪತ್ರೆಯ ಎದುರಿನ ಗುಂಬಜ್‌ಗಳು, ಸ್ಮಾರಕಗಳು ಇಂಡೋ-ಸಾರ್ಸನಿಕ ಶೈಲಿಯಿಂದ ಕೂಡಿದೆ. ಇವುಗಳು ಬಹಮನಿ ಕಾಲದ ಇತಿಹಾಸ ಸಾರುತ್ತವೆ. ಶಹಾಬಜಾರ ಎಂಬ ಬಡವಾಣೆಯಲ್ಲಿ ರಾಜನ ಆದೇಶದಂತೆ ಬಜಾರ್ (ಮಾರುಕಟ್ಟೆ) ನಡೆಯುತ್ತಿತ್ತು ಎನ್ನುವುದು ದಾಖಲೆಗಳಿಂದ ತಿಳಿದುಬರುತ್ತದೆ. ಶೇಖರೋಜಾದ ಮಿನಾರುಗಳು ಚಾರ್ ಮಿನಾರದಂತೆ ಗೋಚರಿಸುತ್ತದೆ ಎಂದರು.

ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್ ಮಾತನಾಡಿ, ಕಳೆದ ಎರಡುವರೆ ವರ್ಷಗಳಿಂದ ಬಳಗದ ವತಿಯಿಂದ ಪ್ರತಿ ಗ್ರಾಮಗಳಿಗೆ ತೆರಳಿ ಜಿಲ್ಲೆಯ ಐತಿಹಾಸಿಕ ಸ್ಥಳಗಳು, ಸ್ಮಾರಕಗಳ ಬಗ್ಗೆ ಪರಿಚಯ ಮತ್ತು ಇತಿಹಾಸ ಜಾಗೃತಿ ಅಭಿಯಾನವು ನಾಡಿನ ಗಮನ ಸೆಳೆಯುತ್ತಿದೆ. ಇಂದಿನ ಪೀಳಿಗೆಯು ಇತಿಹಾಸ ತಿಳಿದುಕೊಳ್ಳಬೇಕು. ತಾಜ್ ಸುಲ್ತಾನಪುರ ಗ್ರಾಮದಲ್ಲಿ ಗುಂಬಜ್‌ಗಳು ಅಳಿವಿನ ಅಂಚಿನಲ್ಲಿವೆ. ಇಂತಹ ಮಹತ್ವದ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.‌

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪುಂಡಲಿಕ್ ಆಜಾದಪುರ, ಸಂತೋಷ ಜಮಾದಾರ, ಹುಸೇನ್ ಮುಜಾವರ್ ಸೇರಿದಂತೆ ಅನೇಕರು ಇದ್ದರು.

ತಾಜ್ ಸುಲ್ತಾನಪುರವು ಬಹಮನಿಯರ ಕಾಲದಲ್ಲಿ ರಾಜ-ರಾಣಿಯರ ನಿವಾಸ ಸ್ಥಳವಾಗಿತ್ತು. ರಾಜನ ಅರಮನೆ ಇರುವ ಸ್ಥಳವೇ ಸುಲ್ತಾನಪುರವಾಗಿತ್ತು. ಸಾತ್ ಗುಂಬಜ್, ಶಹಾಬಜಾರ, ಶೇಖ್‌ರೋಜಾ, ಹೀರಾಪೂರ ಬಹಮನಿಯರ ಭದ್ರವಾದ ಕೋಟೆ, ಜಾಮೀಯಾ ಮಸೀದಿ, ಜಗತ್ತಿನಲ್ಲಿಯೇ ಅತ್ಯಂತ ಉದ್ದವಾದ ತೋಪು ಇಲ್ಲಿಯ ಬಹುತೇಕ ಸ್ಮಾರಕಗಳು ದಕ್ಷಿಣ ಭಾರತದ ಇತಿಹಾಸದ ಪುಟ ತೆರೆಯುತ್ತವೆ. ಅಳಿವಿನ ಅಂಚಿನಲ್ಲಿರುವ ಬಹಮನಿಯರ ಸ್ಮಾರಕಗಳ ರಕ್ಷಣೆ ಅಗತ್ಯವಾಗಿದೆ.

ಮುಡುಬಿ ಗುಂಡೇರಾವ
ಸಂಶೋಧಕ-ಸಾಹಿತಿ ಮತ್ತು ಸಮ್ಮೇಳನಾಧ್ಯಕ್ಷರು
22ನೇ ಸಾಹಿತ್ಯ ಸಮ್ಮೇಳನ ಕಲಬುರಗಿ.

Leave a Reply

Your email address will not be published. Required fields are marked *