ಪಾಠ ಕೇಳುವಾಗಲೆ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿರುವ ಆಘಾತಕಾರಿ ಘಟನೆ ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆ ವೇಳೆ 80ಕ್ಕೂ ಅಧಿಕ ಯುವತಿಯರು ಕೊಠಡಿಯಲ್ಲಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಐವರು ವಿದ್ಯಾರ್ಥಿಗಳಿಗೆ ಈ ವೇಳೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕಾಲೇಜಿನಲ್ಲಿ ಸುಮಾರು 2 ಸಾವಿರ ಜನ ವಿದ್ಯಾರ್ಥಿನಿಯರಿದ್ದು, ಬಹುತೇಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿದ್ದರೂ ಕಾಲೇಜಿನ ಕಟ್ಟಡವೇ ವಿದ್ಯಾರ್ಥಿನಿಗಳ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದೆ. ಇಂದು ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕ್ಲಾಸ್ ರೂಮ್​​ಗೆ ಬಂದಿದ್ದರು. ಕೊಠಡಿಗೆ ಬಂದ ಪ್ರಾಧ್ಯಾಪಕರೂ ಪಾಠ ಶುರುಮಾಡಿದ್ದರು. ಈ ವೇಳೆ ಏಕಾ ಏಕಿ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿದ್ದು, ಘಟನೆಯಲ್ಲಿ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಮತ್ತು ದಿವ್ಯಾ ಎಂಬ ಐದು ಜನ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕೂಡಲೆ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್​​ಗೆ ದಾಖಲಿಸಲಾಗಿದೆ.

8 ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಕಟ್ಟಡ
ಈ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಿ ಇನ್ನೂ 8 ವರ್ಷಗಳೂ ಕಳೆದಿಲ್ಲ. ಹೀಗಿದ್ದರೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ಹಿಂದೆಯೂ ಇದೆ ರೀತಿ ಪ್ಲಾಸ್ಟರ್​​ ಕುಸಿದಿತ್ತು. ಆದರೆ ಆ ಸಮಯದಲ್ಲಿ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿತ್ತು. ಈಗ ಅದೆ ರೂಂನ ಪಕ್ಕದ ಕೊಠಡಿಯಲ್ಲಿ ಘಟನೆ ನಡೆದಿದೆ. ಬಹುತೇಕ ಕ್ಲಾಸ್​​ ರೂಂಗಳ ಸ್ಥಿತಿ ಹೀಗೆ ಇರುವ ಕಾರಣ ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದೆ ಪಾಠ ಕೇಳಬೇಕಾದ ಸ್ಥಿತಿ ಇಲ್ಲಿನದು. ಹೀಗಾಗಿ ಸಂಬಂಧಪಟ್ಟವರು ಈ ಸಂಬಂಧ ತುರ್ತಾಗಿ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ತನಿಖೆಗೆ ಶಾಸಕರ ಆಗ್ರಹ
ಘಟನೆ ಬೆನ್ನಲ್ಲೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿರುವ ಶಾಸಕ ಅಲ್ಲಮಪ್ರಭು ಪಾಟೀಲ್‌, ಕಾಲೇಜು ಕಟ್ಟಡದ ಕಾಮಗಾರಿ ಸಂಬಂಧ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *