ಸುದ್ದಿ ಸಂಗ್ರಹ ಕೊಲ್ಲೂರು
ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಭೇಟಿಯ ಬೆನ್ನಲ್ಲೆ ಅವರು ದೇವಿಯ ಸನ್ನಿಧಿಯಲ್ಲಿ ಮಾಡಿಕೊಂಡಿದ್ದಾರೆನ್ನಲಾದ ‘ಶತ್ರು ಸಂಹಾರ ಸಂಕಲ್ಪ’ ಈಗ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್, ಅಲ್ಲಿಂದ ಮಾಡರ್ನ್ ಉಡುಪಿನಲ್ಲೆ ಕೊಲ್ಲೂರು ಕಡೆಗೆ ಪ್ರಯಾಣ ಬೆಳೆಸಿದರು. ದಾರಿ ಮಧ್ಯೆ ಆರ್ಎನ್ಎಸ್ ಅತಿಥಿ ಗೃಹದಲ್ಲಿ ತಂಗಿ ಅಲ್ಲಿ ಸಾಂಪ್ರದಾಯಿಕ ಉಡುಪಿಗೆ ಬದಲಾದರು. ನಂತರ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸಿಎಂ ಅವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ದೇವಸ್ಥಾನದ ಗರ್ಭಗುಡಿಯ ಮುಂದೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ ವಿಜಯ್, ವಿಶೇಷವಾಗಿ ‘ಶತ್ರು ಸಂಹಾರ ಸಂಕಲ್ಪ’ ನೆರವೇರಿಸಿ ಕೈಗೆ ರಕ್ಷಾಸೂತ್ರ (ದಾರ) ಕಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಸಕ್ರಿಯರಾಗಿರುವ ಬೆನ್ನಲ್ಲೆ ವಿಜಯ್ ಈ ವಿಶೇಷ ಸಂಕಲ್ಪ ಮಾಡಿರುವುದು ಕುತೂಹಲ ಮೂಡಿಸಿದ್ದು, ಆ ‘ಶತ್ರುಗಳು’ ಯಾರು ಎಂಬ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಗಳು ಆರಂಭವಾಗಿವೆ.
ದರ್ಶನದ ಬಳಿಕ ವಿಜಯ್ ತಾವು ತಂದಿದ್ದ ವಿಶೇಷ ಬೆಳ್ಳಿಯ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಭಕ್ತಿಯಿಂದ ಸಮರ್ಪಿಸಿದರು.
ದೇವಿಗೆ ಬೆಳ್ಳಿ ಖಡ್ಗ ನೀಡಿದ ವಿಚಾರಕ್ಕಿಂತಲೂ, ವಿಜಯ್ ರಾಜಕೀಯ ಯಶಸ್ಸಿಗಾಗಿ ಅಥವಾ ವೈಯಕ್ತಿಕ ರಕ್ಷಣೆಗಾಗಿ ಮಾಡಿಕೊಂಡಿದ್ದಾರೆ ಎನ್ನಲಾದ ಈ ‘ಶತ್ರು ಸಂಹಾರ ಸಂಕಲ್ಪ’ದ ಸುದ್ದಿ ಮಾತ್ರ ರಾಜಕೀಯ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.