ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಿದ್ರೆ 25,000 ರೂ. ಗಿಫ್ಟ್

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ರಸ್ತೆ ಅಪಘಾತಗಳಿಂದಾಗಿ ಪ್ರತಿವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೊಳಗಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ನೆರವು ನೀಡುವವರಿಗೆ ಕೇಂದ್ರ ಸರ್ಕಾರ ರಹಾ-ವೀರ್ ಯೋಜನೆ ಅಡಿಯಲ್ಲಿ 25 ಸಾವಿರ ರೂ ನೀಡಲಿದೆ. ಅಲ್ಲದೆ ಅಂಥವರಿಗೆ ಕಾನೂನಿನ ರಕ್ಷಣೆಯನ್ನೂ ನೀಡಲಾಗುತ್ತದೆ.

ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ಸಮಯದಲ್ಲಿ ಗಾಯಾಳುವಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆತರೆ ಸಾವು ಅಥವಾ ಆಗಬಹುದಾದ ಅಪಾಯವನ್ನು ಕಡಿಮೆ ಮಾಡಬಹುದು. ಹೀಗಾಗಿ ರಹಾ-ವೀರ್ ಆಗಲು ಯಾವುದೆ ವೈದ್ಯಕೀಯ ತರಬೇತಿ ಅಗತ್ಯವಿರಲ್ಲ. ಬದಲಾಗಿ ಗಾಯಗೊಂಡವರನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಿದರೆ ಸಾಕು, ಕಾನೂನಿನ ರಕ್ಷಣೆಯನ್ನೂ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿಯಂತೆ ರಸ್ತೆ ಅಪಘಾತಗಳಿಂದ ದೇಶದ ಜಿಡಿಪಿಯ ಶೇ3ರಷ್ಟು ನಷ್ಟವಾಗುತ್ತಿದೆ. ಅಪಘಾತ ನಡೆದಾಗ ಪೊಲೀಸ್ ಕಿರಿಕಿರಿ, ಕೋರ್ಟ್-ಕಚೇರಿ ಅಲೆದಾಟ, ಆಸ್ಪತ್ರೆ ಖರ್ಚು, ಕಾನೂನಿಗೆ ಹೆದರಿ ಜನ ಸಹಾಯ ಮಾಡಲು ಬರಲ್ಲ. ಈ ಭಯ ಹೋಗಲಾಡಿಸುವುದು ರಹಾ-ವೀರ್ ಯೋಜನೆ ಉದ್ದೇಶ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *