35 ವರ್ಷದ ಹಿಂದೆ ಅಪ್ಪ ಖರೀದಿಸಿದ್ದ ಷೇರು ಪತ್ರ ಪತ್ತೆ: ರಾತ್ರೋರಾತ್ರಿ ಶ್ರೀಮಂತನಾದ ಮಗ

ನವದೆಹಲಿ

ನವದೆಹಲಿ: ಮನುಷ್ಯನಿಗೆ ಜೀವನದಲ್ಲಿ ಅದೃಷ್ಟ ಹೇಗೆಲ್ಲಾ ಖುಲಾಯಿಸಬಹುದು ಎಂದು ಊಹಿಸುವುದು ಕಷ್ಟ. ಇದೀಗ ವೈರಲ್‌ ಆಗುತ್ತಿರುವ ಈ ಸುದ್ದಿ ಅದಕ್ಕೊಂದು ಸೇರ್ಪಡೆ. ಹೌದು ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ತನ್ನ ತಂದೆ 1990ರಲ್ಲಿ ಒಂದು ಲಕ್ಷ ರೂ’ಗೆ ಖರೀದಿಸಿದ್ದ ಜೆಎಸ್‌’ಡಬ್ಲ್ಯು ಸ್ಟೀಲ್‌’ನ ಹಳೆಯ ಷೇರು ಪ್ರಮಾಣಪತ್ರ ಸಿಕ್ಕಿದೆ.

ಮೂರು ದಶಕಗಳ ಬಳಿಕ ಈ ಷೇರುಗಳ ಬೆಲೆ ಈಗ ಅಂದಾಜು 80 ಕೋಟಿ ರೂ ಆಗಿದೆ.

ಹೂಡಿಕೆದಾರ ಸೌರವ್‌ ದತ್ತಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್‌ ಮಾಡುವ ಮೂಲಕ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ. Reddit ಬಳಕೆದಾರರೊಬ್ಬರು ತನ್ನ ತಂದೆ 1990ರಲ್ಲಿ ಖರೀದಿಸಿದ್ದ ಜೆಎಸ್‌’ಡಬ್ಲ್ಯು ಸ್ಟೀಲ್‌ ಷೇರುಗಳ ಬಗ್ಗೆ ಉಲ್ಲೇಖಿಸಿ, ಪ್ರಮಾಣಪತ್ರವನ್ನು ಹಂಚಿಕೊಂಡಿದ್ದರು.

ದತ್ತಾ ಅವರ ಎಕ್ಸ್‌ ಪೋಸ್ಟ್’ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ, ರೆಡ್ಡಿಟ್‌ ಬಳಕೆದಾರ ವ್ಯಕ್ತಿಗೆ ಅಭಿನಂದನೆಗಳನ್ನು ಸಲ್ಲಿಸಿ, ತಮ್ಮ ಸ್ವ-ಅನುಭವ ಹಂಚಿಕೊಂಡಿದ್ದಾರೆ.

ದೀರ್ಘಕಾಲದಲ್ಲಿ ಷೇರು ಬೆಲೆ, ಬೋನಸ್‌ ಹಾಗೂ ಡಿವಿಡೆಂಡ್‌’ಗಳಿಂದ ಹೇಗೆ ಮೌಲ್ಯ ಹೆಚ್ಚಳವಾಗುತ್ತದೆ ಎಂಬ ಬಗ್ಗೆ ಜನರಿಗೆ ತಿಳಿದಿಲ್ಲ. ಇದೊಂದು ಮ್ಯಾಜಿಕ್ ಎಂದು ಅನ್ಹಾದ್‌ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ.

ಜೆಎಸ್‌’ಡಬ್ಲ್ಯು ಸ್ಟೀಲ್‌ ಭಾರತದ ಪ್ರಮುಖ ಸ್ಟೀಲ್‌ ಉತ್ಪಾದಕ ಸಂಸ್ಥೆಯಾಗಿದೆ. ಷೇರುಪೇಟೆಯಲ್ಲೂ ತನ್ನದೆ ಛಾಪನ್ನು ಮೂಡಿಸಿರುವ ಜೆಎಸ್‌’ಡಬ್ಲ್ಯು ಷೇರು ಬೆಲೆ ಈಗ ಅಂದಾಜು 1,004.90 ರೂ ಆಗಿದೆ, ಇದರ ಮಾರುಕಟ್ಟೆ ಬಂಡವಾಳ 2.37 ಲಕ್ಷ ಕೋಟಿ ರೂ.

ಇಂತಹದ್ದೆ ಒಂದು ಘಟನೆ ಇತ್ತೀಚೆಗೆ ವರದಿಯಾಗಿತ್ತು. ಚಂಡೀಗಢದ ರತ್ತನ್‌ ಧಿಲ್ಲೋನ್‌ ಎಂಬ ವ್ಯಕ್ತಿಯೊಬ್ಬರಿಗೆ ಮನೆಯಲ್ಲಿ 1988ರಲ್ಲಿ ಖರೀದಿಸಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌’ನ 30 ಷೇರುಗಳ ಸರ್ಟಿಫಿಕೇಟ್‌ ಸಿಕ್ಕಿತ್ತು. ಆದರೆ ರತ್ತನ್‌ ಅವರಿಗೆ ಷೇರು ವಹಿವಾಟಿನ ಬಗ್ಗೆ ಯಾವುದೆ ತಿಳಿವಳಿಕೆ ಇರಲಿಲ್ಲ. ಅದಕ್ಕಾಗಿ ರತ್ತನ್‌ ಅವರು ಸರ್ಟಿಫಿಕೇಟ್‌ ಅನ್ನು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿ ಮಾರ್ಗದರ್ಶನ ನೀಡುವಂತೆ ಕೋರಿದ್ದರು. ಅಂದು ಖರೀದಿಸಿದ್ದ 30 ಷೇರುಗಳು ಬೆಲೆ (ಮೂಲ 30 ಷೇರು ಇಂದಿನ 960 ಷೇರುಗಳಿಗೆ ಸಮಾನ) ಈಗ ಅಂದಾಜು 11.88 ಲಕ್ಷ ರೂಪಾಯಿಯಾಗಿರುವುದಾಗಿ ಎಕ್ಸ್‌ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದರು.

Leave a Reply

Your email address will not be published. Required fields are marked *