ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳು ಸಿಗಲ್ಲ, ತಜ್ಞರು ನೀಡಿದ ಆಘಾತಕಾರಿ ಎಚ್ಚರಿಕೆ ಏನು ?

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಚಾಲಕರು ಮತ್ತು ಕೇರ್‌ಟೇಕರ್‌ಗಳಂತಹ ಕೌಶಲ್ಯ ಆಧಾರಿತ ಉದ್ಯೋಗಿಗಳ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಪೈನ್‌ಟ್ರೀ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ರಿತೇಶ್ ಜೈನ್ ಎಚ್ಚರಿಕೆ ನೀಡಿದ್ದಾರೆ. ಅವರ ಈ ವಿಶ್ಲೇಷಣಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೆನಡಾ ಮೂಲದ ಸಂಶೋಧನಾ ಸಂಸ್ಥೆ ಪೈನ್‌ಟ್ರೀ ಸಂಸ್ಥಾಪಕ ರಿತೇಶ್ ಜೈನ್ ಅವರು ಲಿಂಕ್ಡ್‌ಇನ್‌ನಲ್ಲಿ ಈ ವಿಚಾರದ ಬಗ್ಗೆ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ವಿಶ್ವದ ಅನೇಕ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಯುವ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಆ ದೇಶಗಳು ಭಾರತ ಸೇರಿದಂತೆ ಇತರ ರಾಷ್ಟ್ರಗಳಿಂದ ಕೌಶಲ್ಯ ಹೊಂದಿರುವ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಗಿಬೀಳುತ್ತಿವೆ. ಇದರ ಪರಿಣಾಮವಾಗಿ, ಇಂಜಿನಿಯರ್‌ಗಳಿಗಿಂತಲೂ ಮೊದಲು ಭಾರತದಲ್ಲಿ ಪ್ಲಂಬರ್‌ಗಳ ಕೊರತೆ ಉಂಟಾಗಬಹುದು ಎಂದು ರಿತೇಶ್ ಜೈನ್ ಆತಂಕ ವ್ಯಕ್ತಪಡಿಸಿದ್ದಾರೆ.

ಯುರೋಪ್, ಅಮೆರಿಕ ಸೇರಿದಂತೆ ಹಲವು ಮುಂಚೂಣಿ ರಾಷ್ಟ್ರಗಳಲ್ಲಿ ಜನನ ಪ್ರಮಾಣ ಕುಸಿಯುತ್ತಿದ್ದು, ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಅಲ್ಲಿನ ನಿರ್ಮಾಣ, ತಾಂತ್ರಿಕ ನಿರ್ವಹಣೆ, ಆರೋಗ್ಯ ಸೇವೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಪ್ಲಂಬರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್‌ಗಳಂತಹ ವೃತ್ತಿಪರರನ್ನು ಹುಡುಕುವುದು ಅಲ್ಲಿನ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅನೇಕ ಹಿರಿಯ ಕಾರ್ಮಿಕರು ನಿವೃತ್ತಿಯಾಗುತ್ತಿದ್ದು, ವಿದೇಶಗಳ ಯುವ ಪೀಳಿಗೆಯವರು ಈ ಶ್ರಮದಾಯಕ ಕೆಲಸಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ.

ಜಾಗತಿಕ ಮಟ್ಟದ ಈ ಬಿಕ್ಕಟ್ಟಿನಿಂದಾಗಿ, ಭಾರತದಂತಹ ಯುವ ಜನಸಂಖ್ಯೆ ಹೆಚ್ಚಿರುವ ರಾಷ್ಟ್ರಗಳ ಕಾರ್ಮಿಕರಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ವಿಶೇಷವಾಗಿ ನರ್ಸ್‌ಗಳು, ಆರೈಕೆ ಸಿಬ್ಬಂದಿ, ನಿರ್ಮಾಣ ಕಾರ್ಮಿಕರು ಹಾಗೂ ತಾಂತ್ರಿಕ ಕೌಶಲ್ಯ ಹೊಂದಿರುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಮುಂದಿನ ವರ್ಷಗಳಲ್ಲಿ ವಿದೇಶಗಳಲ್ಲಿ ಸಿಗುವ ಹೆಚ್ಚಿನ ವೇತನದ ಆಕರ್ಷಣೆಯಿಂದಾಗಿ, ಭಾರತದ ಕೌಶಲ್ಯಯುತ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ವಿದೇಶಗಳಿಗೆ ವಲಸೆ ಹೋಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ವಿದೇಶಗಳಲ್ಲಿ ಕೌಶಲ್ಯ ಆಧಾರಿತ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಭಾರತದಲ್ಲಿ ಲಕ್ಷಾಂತರ ಯುವಕರು ಕೇವಲ ಪದವಿಗಳನ್ನು ಪಡೆದು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ದೇಶದ ಯುವ ಪದವೀಧರರಲ್ಲಿ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚಾಗಿಯೇ ಉಳಿದಿದೆ. ಅಂದರೆ, ಭಾರತೀಯ ಉದ್ಯೋಗದಾತರು ಕೌಶಲ್ಯಯುತ ಪ್ರಾಯೋಗಿಕ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದರೆ, ಇತ್ತ ಕೌಶಲ್ಯರಹಿತ ಪದವೀಧರರಿಗೆ ಸೂಕ್ತ ಉದ್ಯೋಗ ಸಿಗುತ್ತಿಲ್ಲ.

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್ ಸೇರಿದಂತೆ ಅಗತ್ಯ ಸೇವೆಗಳ ಸಿಬ್ಬಂದಿಯ ಕೊರತೆ ಉಂಟಾಗಬಹುದು. ಆದರೆ ಅದೆ ಸಮಯದಲ್ಲಿ ದೇಶದಲ್ಲಿ ಉದ್ಯೋಗವಿಲ್ಲದ ಪದವೀಧರರ ಸಂಖ್ಯೆ ಹೆಚ್ಚಾಗುವ ಸಿಬ್ಬಂದಿ ಪರಿಸ್ಥಿತಿಯ ಅಪಾಯವೂ ಇದೆ ಎಂದು ರಿತೇಶ್ ಜೈನ್ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *