ಸುದ್ದಿ ಸಂಗ್ರಹ ಚಿತ್ತಾಪುರ
ಭೂಭಾಗದ ಶೇ 33ರಷ್ಟು ಹಸಿರು ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆ ಬಹಳ ಕಡಿಮೆಯಿದ್ದು, ಅದನ್ನು ಹೆಚ್ಚಿಸಲು ಇನ್ನಷ್ಟು ಆದ್ಯತೆ ನೀಡಲಾಗುವುದು’ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಕೆಕೆಆರ್ಡಿಬಿ ಹಾಗೂ ಮೂರ್ತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಸುಮಾರು 42 ಎಕರೆ 38 ಪ್ರದೇಶದ ವಿಸ್ತೀರ್ಣದಲ್ಲಿ 37.31 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಕಲಬುರಗಿ ಮೃಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಕ್ಕೆ ಋತುಮಾನಗಳನ್ನೇ ಬದಲಿಸುವ ಶಕ್ತಿ ಇದೆ. ಆದರೆ, ನಮ್ಮಲ್ಲಿ ಅರಣ್ಯ ಕಡಿಮೆಯಿದೆ. ಕಲಬುರಗಿ ಜಿಲ್ಲೆಯಲ್ಲಿ ಬರೀ ಶೇ2ಕ್ಕಿಂತಲೂ ಕಡಿಮೆ, ವಿಜಯಪುರದಲ್ಲಿ ಶೇ1ರಷ್ಟು, ಬೀದರ್ನಲ್ಲಿ ಶೇಕಡಾ 5ರಷ್ಟುಪ್ರದೇಶದಲ್ಲಿ ಹಸಿರಿದೆ. ಹಸಿರು ಕಡಿಮೆ ಇರುವ ಕಾರಣ ಈ ಭಾಗದಲ್ಲಿ ತಾಪಮಾನ ನೋಡುತ್ತಿದ್ದೆವೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬೀದರ್ನಲ್ಲಿ 30 ಲಕ್ಷ ಸಸಿ, ಕಲಬುರಗಿಯಲ್ಲಿ 11 ಲಕ್ಷದಷ್ಟು ಸಸಿ ನೆಟ್ಟಿದ್ದೇವೆ. ಅದರಲ್ಲಿ ಶೇ 80ರಷ್ಟು ಬೆಳೆಯುತ್ತಿವೆ. ಅರಣ್ಯ ಇಲಾಖೆ ಮಾರ್ಗಸೂಚಿಯಂತೆ ಹಿಂದೆಲ್ಲ ಬೇಸಿಗೆಯಲ್ಲಿ ಮೂರು ಸಲ ಮಾತ್ರವೇ ಗಿಡಗಳಿಗೆ ನೀರು ಹಾಕುತ್ತಿದ್ದೆವು. ಆದರೆ, ಕಲ್ಯಾಣ ಭಾಗದಲ್ಲಿ ಬಿಸಿಲು ಹೆಚ್ಚು ಎಂದು ನಾಲ್ಕೈದು ಸಲ ನೀರು ಹಾಕುವಂತೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಬೆಂಗಳೂರು ಒಂದರಲ್ಲಿ 10 ಸಾವಿರ ಕೋಟಿ ಮೊತ್ತದ 250 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಖಂಡ್ರೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕಲಬುರಗಿ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿಶಂಕರ ಎಸ್.ಎಸ್, ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಕಲಬುರಗಿ ಡಿಸಿಎಫ್ ಸುಮಿತ್ಕುಮಾರ್ ಪಾಟೀಲ, ಮೂರ್ತಿ ಟ್ರಸ್ಟ್ ಪ್ರತಿನಿಧಿ ಪ್ರಿಯಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಸವರಾಜ ಎಸ್. ಡಾಂಗೆ, ಸುನೀಲಕುಮಾರ್, ವಲಯ ಅರಣ್ಯಾಧಿಕಾರಿಗಳಾದ ನಾಗೇಶ, ವಿಜಯ ಕುಮಾರ ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಅಧಿಕಾರಿ-ಸಿಬ್ಬಂದಿ ಇದ್ದರು.