ಸುದ್ದಿ ಸಂಗ್ರಹ ಕಲಬುರಗಿ
ಯಡ್ರಾಮಿ ತಾಲೂಕಿನ ಶ್ರೀಕ್ಷೇತ್ರ ಕಾಖಂಡಕಿ ಸದ್ಗುರು ಮಲ್ಲಾರಾಧ್ಯ ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಮಧ್ಯರಾತ್ರಿ ಭಕ್ತರು ತನಾರತಿ ಹೊತ್ತು ಗುರುದ್ವಯರಿಗೆ ತಮ್ಮ ಹರಕೆಯನ್ನು ತೀರಿಸಿದರು ಎಂದು ನಾಲವಾರ ಶ್ರೀ ಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
ನಾಲವಾರ- ಕಾಖಂಡಕಿ ಮಠಗಳ ಪೀಠಾಧಿಪತಿ ಡಾ.ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬಾದಾಮಿ ಅಮಾವಾಸ್ಯೆ ನಿಮಿತ್ತ ದಕ್ಷಿಣ ಭಾರತದ ಮಹಾದೀಪಮೇಳವೆಂದೆ ಪ್ರಖ್ಯಾತವಾದ ನಾಲವಾರ ಮಠದ ಪರಂಪರೆಯ ತನಾರತಿ ಉತ್ಸವಕ್ಕೆ ಭಕ್ತರು ಮಧ್ಯರಾತ್ರಿಯೆ ಸ್ನಾನ ಮಾಡಿ ಮಡಿಯುಟ್ಟು ಗೋಧಿ ಹಿಟ್ಟಿನ ಹರಕೆಯ ದೀಪಗಳನ್ನು ಮಾಡಿ ಜ್ಯೋತಿ ಪ್ರಜ್ವಲಿಸಿ ತನಾರತಿ ಉತ್ಸವಕ್ಕೆ ಸಿದ್ಧರಾದರು.
ಪೀಠಾಧಿಪತಿ ಡಾ.ಸಿದ್ದತೋಟೆಂದ್ರ ಮಹಾಸ್ವಾಮಿಗಳು ಮಧ್ಯರಾತ್ರಿ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಮಠದ ಪರಂಪರೆಯ ವಿಶೇಷ ಪೋಷಾಗಳನ್ಧು ಧರಿಸಿ ಪುಷ್ಪಗಳಿಂದ ಅಲಂಕೃತರಾಗಿ ತನಾರತಿ ಉತ್ಸವದಲ್ಲಿ ಪಾಲ್ಗೊಂಡರು. ವಿವಿಧ ವಾದ್ಯವೃಂದ, ನಾದಸ್ವರ, ಪೂರ್ಣಕುಂಭ ಛತ್ರಜಾ ಮರುಗೊಂದಿಗೆ ಪೂರ್ಣಕುಂಭ ಕಲಶ ವೈದಿಕ ವೇದಘೋಷ, ಪುರವಂತರ ಪುರವಂತಿಕೆಯೊಂದಿಗೆ ಪೂಜ್ಯರು ಗುರುದ್ವಯರ ಗದ್ದುಗೆಗೆ ಐದು ಪ್ರದಕ್ಷಿಣೆ ಹಾಕಿದರೆ ಭಕ್ತರು ತನಾರತಿ ಹೊತ್ತು ಪೂಜ್ಯರ ಹಿಂದೆ ಹೆಜ್ಜೆ ಹಾಕಿದರು.
ಶನಿವಾರ ಮಧ್ಯರಾತ್ರಿ ಪ್ರಾರಂಭವಾದ ತನಾರತಿ ಉತ್ಸವ ರವಿವಾರ ಬೆಳಗಿನ ಜಾವದವರೆಗೆ ನಡೆಯಿತು. ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಜನ ಭಕ್ತರು ತನಾರತಿ ಉತ್ಸವದಲ್ಲಿ ಪಾಲ್ಗೊಂಡರು.