ಸುದ್ದಿ ಸಂಗ್ರಹ ಬೆಂಗಳೂರು
ಮೇ 5 ರಿಂದ 9 ರವರೆಗೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಒಟ್ಟಾರೆ ಬೆಂಗಳೂರು ನಗರ ಸೇರಿದಂತೆ 23 ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಲಿದೆ.
ಮೇ 4ರಂದು ಎಲ್ಲೆಲ್ಲಿ ?
ಮೇ 4 ಸೋಮವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದ್ದು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮೇ 5ರಂದು ಎಲ್ಲೆಲ್ಲಿ ?
ಮೇ 5 ಮಂಗಳವಾರದಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿ ಸಹಿತ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಮೇ 6ರಂದು ಎಲ್ಲೆಲ್ಲಿ ?
ಮೇ 6 ಬುಧವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ.ಎನ್. ಪುವಿಯರಸನ್ ತಿಳಿಸಿದ್ದಾರೆ.