ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ ಜೋರಾಗಿದ್ದು, ಗುಡುಗು ಸಹಿತ ಬಿರುಗಾಳಿ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಬೀದರ್ ತಾಲೂಕಿನ ಅಣದೂರು ವಾಡಿ ಗ್ರಾಮದ ಬಳಿ ಇರುವ ಮಾಂಜ್ರಾ ವಾಟರ್ ಪಾರ್ಕ್ನಲ್ಲಿ ಗೋಡೆ ಕುಸಿದು ಬಿದ್ದು ಅನಾಹುತ ಸಂಭವಿಸಿದೆ. ಮಕ್ಕಳು, ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಚವಡಿ ಕೂಟ ಬಳಿ ಮನೆಯ ಮೇಲಿದ್ದ ಸಿಂಟೆಕ್ಸ್ ಕಿತ್ತು ಬಂದು, ವಿದ್ಯುತ್ ತಂತಿಯ ಮೇಲೆ ಕೂತು ನೇತಾಡಿದೆ. ಕಲಬುರಗಿ ಜಿಲ್ಲೆಯ ಪಿಲ್ಲಿಗುಂಟಾ ತಾಂಡಾದಲ್ಲಿ ಸಿಡಿಲಿಗೆ 25 ಮೇಕೆಗಳು ಬಲಿಯಾಗಿವೆ. ಚಿಕ್ಕೋಡಿ ಉಪ ವಿಭಾಗದಲ್ಲಿ ಬಿರುಗಾಳಿ ಸಮೇತ ಸುರಿದ ಮಳೆಗೆ ಕಟಕಭಾವಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.
ಬಳ್ಳಾರಿಯಲ್ಲಿ ನಾನಾ ಅವಾಂತರವಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಮರ, ಕಂಬಗಳು ಧರೆಗುರುಳಿವೆ. ಬೃಹತ್ ಮರ ಬಿದ್ದು ಎರಡು ಕಾರು ಜಖಂ ಆಗಿವೆ. ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ, ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಚಿತ್ರದುರ್ಗದಲ್ಲೂ ಮಳೆಯಿಂದ ನಗರದ ಮುಖ್ಯರಸ್ತೆ ಜಲಾವೃತವಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಗಾಳಿ ಮಳೆಗೆ ಸದಾಶಿವ ನಗರದಲ್ಲಿ ಬೃಹತ್ ಮರ ಕಾರಿನ ಮೇಲೆ ಉರುಳಿದೆ.