ಸುದ್ದಿ ಸಂಗ್ರಹ ಶಹಾಬಾದ
ಮನುಷ್ಯನಿಗೆ ಹುಟ್ಟು ಸಾವು ಸ್ವಾಭಾವಿಕ, ಆದರೆ ಬದುಕಿದ್ದಾಗ ನಾಲ್ಕು ಜನರಿಗಾಗಿ ಉಪಯೋಗವಾಗುವಂತಹ ಕೆಲಸ ಮಾಡಿದ್ದರೆ, ಆತ ಸತ್ತ ನಂತರವೂ ಬದುಕಿರುತ್ತಾನೆ. ಅಂತಹ ಮಹತ್ವದ ಕೆಲಸ ಬಸವಣ್ಣನವರು ಮಾಡಿದ್ದು, ಇಂದು ಇಡಿ ವಿಶ್ವವೇ ಬಸವಣ್ಣನವರನ್ನು ವಿಶ್ವಮಾನವ ಎಂದು ಕೊಂಡಾಡುತ್ತಿದೆ ಎಂದು ಹಡಪದ ಅಪ್ಪಣ್ಣ ಮಠದ ಪೀಠಾಧಿಪತಿ ರಾಜಶಿವಯೋಗಿ ಪೂಜ್ಯರು ಹೇಳಿದರು.
ನಗರದ ಹಳೆ ಶಹಾಬಾದ ಬಡಾವಣೆಯಲ್ಲಿ ಬಸವಾದಿ ಶರಣರ ಒಕ್ಕೂಟ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಘಟಕ ಮತ್ತು ವೀರಭದ್ರೇಶ್ವರ ಜಾರಿಟೇಬಲ್ ಟ್ರಸ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಸಾಂಸ್ಕೃತಿಕ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ನುಡಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದರೆ, ಅವರಿಗಿದ್ದ ಜ್ಞಾನ ಮತ್ತು ದೂರದೃಷ್ಟಿಯನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಜಾತಿ, ಧರ್ಮ, ಲಿಂಗ ಸಮಾನತೆಯ ಆಶಯದೊಂದಿಗೆ ತನ್ನ ಬದುಕಿನ ಕೊನೆಯವರೆಗೂ ಅದಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಬಸವಣ್ಣ. ಅವರ ಪ್ರತಿಯೊಂದು ವಚನಗಳು ಇನ್ನೊಬ್ಬರ ಮನ ಪರಿವರ್ತನೆಗೆ ದಾರಿದೀಪವಾಗಿವೆ ಎಂದರು.
ಪತ್ರಕರ್ತರ ಸಂಘ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್ ಮಾತನಾಡಿ, 12ನೇ ಶತಮಾನದಲ್ಲಿಯೇ ಜಾತೀಯತೆ, ಮೂಢನಂಬಿಕೆ ಮತ್ತು ಅಸಮಾನತೆಯ ವಿರುದ್ಧ ಸಿಡಿದೆದ್ದು, ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲ ಸಂಸತ್ತನ್ನು ಸ್ಥಾಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಸೇರಿದಂತೆ ಅಂದಿನ ಸಾಮಾಜಿಕ ಪಿಡುಗುಗಳ ವಿರುದ್ಧ ಬಸವಣ್ಣನವರು ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಪೂರ್ಣಗೊಂಡಿಲ್ಲ. ಇದು ಪೂರ್ಣಗೊಳ್ಳಬೇಕೆಂದರೆ ವರ್ತಮಾನದ ಯುವ ಪೀಳಿಗೆಗೆ ಬಸವಣ್ಣನವರ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕ ಗಿರಿರಾಜ ಪವಾರ, ಮಾತನಾಡಿದರು. ಪತ್ರಕರ್ತರಾದ ಲೋಹಿತ ಕಟ್ಟಿ, ನಿಂಗಣ್ಣ ಜಂಬಗಿ, ಶಿವಕುಮಾರ ಕುಸಾಳೆ, ಬಾಬಾ ಖಾನ, ನಾಗೇಂದ್ರ ನಾಟೀಕಾರ, ಸ್ನೇಹಲ್ ಜಾಯಿ, ವಾಜೀದಖಾನ ಜಮಾದಾರ, ಮಲ್ಲಿಕಾರ್ಜುನ ವಾಲಿ, ದೇವಿಂದ್ರ ಹೊನಗುಂಟಿ, ಶಿವಕುಮಾರ ನಾಟೀಕಾರ, ಬಸವರಾಜ ದಂಡಗುಲಕರ್, ಅರುಣ ಜಾಯಿ, ರಮೇಶ ಪವಾರ, ಬಾನುಪ್ರತಾಪ ಪವಾರ, ಗಿರಿರಾಜ ಪವಾರ, ಶಿವಕುಮಾರ ಕೊಳ್ಳಿ ವೇದಿಕೆಯಲ್ಲಿದ್ದರು.
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಗೌಡ ಪಾಟೀಲ ನೇರವೆರಿಸಿದರು.
ಬಸವಣ್ಣಪ್ಪ ವಾಲಿ ಅಧ್ಯಕ್ಷತೆ ವಹಿಸಿದರು. ಬಸವಾದಿ ಶರಣದ ಒಕ್ಕೂಟ ಸಮಿತಿಯ ಪದಾಧಿಕಾರಿಗಳು, ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಮೆರವಣಿಗೆಯಲ್ಲಿ ಶರಣರ ವಚನಗಳ ಸಂಗೀತದೊಂದಿಗೆ ಯುವಕರು, ಮುಖಂಡರು ಹೆಜ್ಜೆ ಹಾಕುವ ಮೂಲಕ ಮೆರವಣೆಗೆಯಲ್ಲಿ ಶರಣರ ಭಕ್ತಿ ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಶಾಂತಪ್ಪ ಹಡಪದ, ಗಿರಿಮಲ್ಲಪ್ಪ ವಳಸಂಗ ನಿರೂಪಿಸಿದರು, ಸಂತೋಷಗೌಡ ಪಾಟೀಲ್ ಸ್ವಾಗತಿಸಿದರು, ಅಣ್ಣರಾವ ಹಳ್ಳಿ ವಂದಿಸಿದರು.