ಕಲಬುರಗಿ: ಎಲ್ಲಾ ವರ್ಗದವರಿಗೂ ಸಂಪೂರ್ಣ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಒದಗಿಸುವ ಗುರಿಯನ್ನು ವಿಶ್ವ ಸಂಸ್ಥೆ 2030ರಲ್ಲಿ ಹೊಂದಿದೆ. ಇದನ್ನು ಸಾಧಿಸಲು ಸದಸ್ಯ ರಾಷ್ಟ್ರಗಳು ಕೈಜೋಡಿಸಬೇಕು ಮತ್ತು ಯುವ ಜನತೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ವಿಶ್ವಸಂಸ್ಥೆ ತಿಳಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಪನ್ಯಾಸ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ “ವಿಶ್ವ ಯುವ ಕೌಶಲಗಳ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯು 2014 ಜುಲೈ-15 ರಂದು ಸಾಮನ್ಯ ಸಭೆಯಲ್ಲಿ ಈ ದಿನವನ್ನು ವಿಶ್ವ ಯುವ ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ‘ವಿಶ್ವ ಯುವ ಕೌಶಲ್ಯ ದಿನ’ವನ್ನು ಆಚರಣೆ ಮಾಡಲಾಗುತ್ತಿದೆ. ಯುವ ಜನೆತೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಕೌಶಲ್ಯದ ಪ್ರಾಮುಖ್ಯತೆ ಸಾರುವ ಉದ್ದೇಶವಾಗಿದೆ ಎಂದರು.
ಯುವಕರಲ್ಲಿ ಕೌಶಲ ಬೆಳೆಸಬೇಕು ಎಂಬ ಉದ್ದೇಶದಿಂದ ಸರ್ಕಾರವು ಪ್ರಧಾನ ಮಂತ್ರಿ ವಿಕಾಸ್ ಯೋಜನೆ, ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳ ಸ್ಥಾಪನೆ, ಕುಶಲಕರ್ಮಿ ತರಬೇತಿ ಯೋಜನೆ, ಸುಧಾರಿತ ವೃತ್ತಿಪರ ತರಬೇತಿ ಯೋಜನೆ, ಕೈಗಾರಿಕಾ ಮೌಲ್ಯ ವರ್ಧನೆಗಾಗಿ ಕೌಶಲ್ಯ ಸಾಮರ್ಥ್ಯ ಯೋಜನೆ’ಗಳು ಜಾರಿಗೊಳಿಸಿದೆ. ಕೌಶಲಗಳಿದ್ದರೆ ಮಾತ್ರ ವೃತ್ತಿಪರ ಜೀವನದಲ್ಲಿ ತ್ವರಿತವಾಗಿ ಯಶಸ್ಸನ್ನು ಸಾಧಿಸಬಹುದು. ಆದ್ದರಿಂದ ಎಲ್ಲರು ಕೌಶಲಗಳನ್ನು ಅಳವಡಿಸಿಕೊಳ್ಳಬೇಕಾದದ್ದು ಅಗತ್ಯತೆಯಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಯುವ ಸಮಾಜ ಸೇವಕರಾದ ಸುಕೇಶ್ ಮಠದ್, ಸಿದ್ದಲಿಂಗ ತಳವಾರ, ರಜನೀಕಾಂತ ದೇವಕರ್, ದಕ್ಷರಾಜ ಮಠದ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.