ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕದಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ. ಬೆಸ್ಕಾಂ ದರ ಪ್ರತಿ ಯೂನಿಟ್‌ಗೆ 56 ಪೈಸೆ ಏರಿಕೆಯಾಗಿದೆ. ಜೊತೆಗೆ ಸೆಸ್ಕ್ 15 ಪೈಸೆ ಹೆಚ್ಚಳವಾಗಿದೆ. ಉಳಿದಂತೆ ಮೆಸ್ಕಾಂ 9 ಪೈಸೆ, ಜೆಸ್ಕಾಂ, ಹೆಸ್ಕಾಂ ದರವು 10 ಪೈಸೆ, ಎಚ್‌ಆರ್‌ಇಸಿಎಸ್ 1.55 ರೂ. ಪ್ರತಿ ಯೂನಿಟ್‌ಗೆ ಕಡಿಮೆಯಾಗಿದೆ.
2024-25ನೇ ಆರ್ಥಿಕ ವರ್ಷದಲ್ಲಿ ಬೆಸ್ಕಾಂಗೆ ಉಂಟಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ಸರಿದೂಗಿಸಲು, ಮುಂಬರುವ 2026-27ನೇ ಸಾಲಿನಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ 56 ಪೈಸೆ ಹೆಚ್ಚುವರಿಯಾಗಿ ವಸೂಲಿ ಮಾಡಲು ಆಯೋಗ ಆದೇಶ ಹೊರಡಿಸಿದೆ.
ಈ ಹೊಸ ದರವು ಮೇ 1 ರಿಂದ ಜಾರಿಗೆ ಬರಲಿದ್ದು, ಮುಂದಿನ ವರ್ಷ ಏಪ್ರಿಲ್ 30ವರೆಗೂ ಅನ್ವಯವಾಗಲಿದೆ. ಆಯಾ ಎಸ್ಕಾಂಗಳ ಸಾಲ, ನಿರ್ವಹಣಾ ಪ್ರಮಾಣ ಆಧರಿಸಿ ದರ ಏರಿಕೆ ಮಾಡಲಾಗಿದೆ. ಸದ್ಯ ಗೃಹ ಬಳಕೆ 145 ಕಿ.ವಾ ಗೆ 5.80 ರೂ, ವಾಣಿಜ್ಯ ಬಳಕೆಗೆ 7.15 ದರ ಇತ್ತು. ಬೆಸ್ಕಾಂನದಲ್ಲಿ 56 ಪೈಸೆ, ಚೆಸ್ಕಾಂನಲ್ಲಿ 15 ಪೈಸೆ ಹೆಚ್ಚಳವಾಗಿದೆ.
ಬೆಸ್ಕಾಂಗೆ 2,068 ಕೋಟಿ ರೂ. ಆದಾಯದ ಕೊರತೆ
ಆಯೋಗದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಆದೇಶದ ಪ್ರಕಾರ, 2024-25ನೇ ಸಾಲಿನಲ್ಲಿ ಬೆಸ್ಕಾಂನ ವಾರ್ಷಿಕ ಆದಾಯದ ಅಗತ್ಯತೆ 34,087.94 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆದರೆ ವಿದ್ಯುತ್ ಮಾರಾಟದಿಂದ 32,019.56 ಕೋಟಿ ರೂ. ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಒಟ್ಟು 2,068.38 ಕೋಟಿ ರೂ.ಗಳ ಭಾರಿ ಆದಾಯದ ಕೊರತೆ ಉಂಟಾಗಿದೆ ಎಂದು ಆಯೋಗ ಗುರುತಿಸಿದೆ.
ಗ್ರಾಹಕರಿಂದಲೆ ನಷ್ಟ ವಸೂಲಿ
ಈ 2,068.38 ಕೋಟಿ ರೂ.ಗಳ ಕೊರತೆಯನ್ನು ಬೆಸ್ಕಾಂ ವ್ಯಾಪ್ತಿಯ ಸಕ್ರಿಯ ಗ್ರಾಹಕರಿಂದಲೆ ವಸೂಲಿ ಮಾಡಲು ಕೆಇಆರ್‌ಸಿ ನಿರ್ಧರಿಸಿದೆ. ಈ ನಷ್ಟವನ್ನು ಒಮ್ಮೆಲೆ ಹೇರುವ ಬದಲು, 2026-27ನೇ ಆರ್ಥಿಕ ವರ್ಷದಲ್ಲಿ ವಸೂಲಿ ಮಾಡಲು ಆದೇಶಿಸಲಾಗಿದೆ. ಇದರ ಪರಿಣಾಮವಾಗಿ, 2026-27ನೇ ಸಾಲಿನಲ್ಲಿ ಗ್ರಾಹಕರು ತಾವು ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಹೆಚ್ಚುವರಿಯಾಗಿ 56 ಪೈಸೆ ಪಾವತಿಸಬೇಕಾಗುತ್ತದೆ.
ಕರ್ನಾಟಕದ ಎಸ್ಕಾಂಗಳು ಯಾವ ಜಿಲ್ಲೆ ವ್ಯಾಪ್ತಿಗೆ ?
ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ನಿರ್ವಹಿಸಲು ರಾಜ್ಯವನ್ನು 5 ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗವನ್ನು ಒಂದೊಂದು ವಿದ್ಯುತ್ ಸರಬರಾಜು ಕಂಪನಿ ನಿರ್ವಹಿಸುತ್ತದೆ.
- ಬೆಸ್ಕಾಂ ವ್ಯಾಪ್ತಿ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು. ಪ್ರತಿ ಯುನಿಟ್‌ಗೆ 56 ಪೈಸೆ ಏರಿಕೆ.
- ಮೆಸ್ಕಾಂ ವ್ಯಾಪ್ತಿ: ಕರಾವಳಿ ಮತ್ತು ಮಲೆನಾಡು ಭಾಗಗಳು – ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು. ಪ್ರತಿ ಯೂನಿಟ್‌ಗೆ 9 ಪೈಸೆ ಇಳಿಕೆ.
- ಹೆಸ್ಕಾಂ ವ್ಯಾಪ್ತಿ: ಉತ್ತರ ಕರ್ನಾಟಕದ ಭಾಗಗಳು – ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು. ಪ್ರತಿ ಯೂನಿಟ್‌ಗೆ 10 ಪೈಸೆ ಇಳಿಕೆ.
- ಜೆಸ್ಕಾಂ ವ್ಯಾಪ್ತಿ: ಕಲ್ಯಾಣ ಕರ್ನಾಟಕ ಭಾಗಗಳು – ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು. ಪ್ರತಿ ಯೂನಿಟ್‌ಗೆ 10 ಪೈಸೆ ಇಳಿಕೆ.
- ಸೆಸ್ಕ್ ವ್ಯಾಪ್ತಿ: ದಕ್ಷಿಣ ಕರ್ನಾಟಕದ ಭಾಗಗಳು – ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳು. ಪ್ರತಿ ಯೂನಿಟ್‌ಗೆ 15 ಪೈಸೆ ಏರಿಕೆ.
- ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ – ಗೋಕಾಕ್, ಚಿಕ್ಕೋಡಿ, ಹುಕ್ಕೇರಿ ತಾಲೂಕು ವ್ಯಾಪ್ತಿ. 1.55 ರೂ. ಇಳಿಕೆ
.