ಬಿಸಿಲು: ಕೋರ್ಟ್ ಸಮಯ ಬದಲು

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನೆ ದಿನೆ ಹೆಚ್ಚುತ್ತಿದ್ದು, ಕಲಬುರಗಿ ಹೈಕೋರ್ಟ್‌ ಪೀಠ ಸೇರಿದಂತೆ ಈ ಭಾಗದ ಎಲ್ಲ ನ್ಯಾಯಾಲಯಗಳ ಕಚೇರಿ ಅವಧಿ ಮತ್ತು ಕಲಾಪದ ಅವಧಿಯ ಸಮಯ ಬದಲಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಅನ್ವಯಿಸುವಂತೆ ಎರಡು ತಿಂಗಳ ಅವಧಿಗೆ ಸರ್ಕಾರಿ ಕಚೇರಿಗಳ ಸಮಯ ಬದಲಾಯಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೆ ಹೈಕೋರ್ಟ್‌ನ ಈ ಅದೇಶ ಹೊರಬಿದ್ದಿದೆ. ಕಲಬುರಗಿ ಹೈಕೋರ್ಟ್‌ ಪೀಠ ಹಾಗೂ ಜಿಲ್ಲೆಗಳ ಎಲ್ಲ ನ್ಯಾಯಾಲಯಗಳ ಕಚೇರಿ ಸಮಯ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಇರಲಿದೆ. ಕೋರ್ಟ್ ಕಲಾಪಗಳ ಅವಧಿಯು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಇರಲಿದೆ. ಬೆಳಿಗ್ಗೆ 11ರಿಂದ 11.30ರವರೆಗೆ ಅಲ್ಪ ವಿರಾಮ ನೀಡಲಾಗಿದೆ. ಹೈಕೋರ್ಟ್ ಪೀಠದಲ್ಲಿ ಶನಿವಾರಕ್ಕೆ ಕಚೇರಿ ಅವಧಿಯಲ್ಲಿ ಬೆಳಿಗ್ಗೆ 7.30ರಿಂದ 11 ಗಂಟೆ ವರೆಗೆ ಇರಲಿದೆ. ಜಿಲ್ಲೆಯ ವಿವಿಧ ಕೋರ್ಟ್‌ಗಳಲ್ಲಿ ಕಲಾಪ ರಹಿತ ದಿನಗಳಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆಯ ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಹಾಗೂ ಕ್ರಿಮಿನಲ್‌ ಕೋರ್ಟ್‌ಗಳು, ಕೌಟುಂಬಿಕ ಕೋರ್ಟ್‌ಗಳು ಮತ್ತು ಕಾರ್ಮಿಕ ಕೋರ್ಟ್‌ಗಳಿಗೆ ಈ
ವೇಳಾಪಟ್ಟಿ ಅನ್ವಯಿಸಲಿದೆ. ಜಿಲ್ಲೆಗಳ ಕೋರ್ಟ್‌ಗಳಿಗೆ ಏಪ್ರಿಲ್‌ 4ರಿಂದ ಮೇ ಅಂತ್ಯದ ವರೆಗೆ ಮತ್ತು ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಈ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಕರ್ನಾಟಕ ಹೈಕೋರ್ಟ್‌ ರೆಜಿಸ್ಟ್ರಾ‌ ಜನರಲ್ ಕೆ.ಎಸ್ ಭರತಕುಮಾರ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *