ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆ: ಧರೆಗೆ ಉರುಳಿದ ವಿದ್ಯುತ್ ಕಂಬಗಳು, ಮರ ಬಿದ್ದು ಆಟೋ ಜಖಂ

ಜಿಲ್ಲೆ

ಸುದ್ದಿ ಸಂಗ್ರಹ ಹಾವೇರಿ
ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಣೆಬೆನ್ನೂರಿನ ಗೌರಿಶಂಕರ ನಗರದಲ್ಲಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ಹಾಗೂ ಮನೆಯ ಮುಂಭಾಗ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. ಮಳೆ ಬೀಳುವ ಸಮಯದಲ್ಲಿ ಜನರು ಇಲ್ಲದಿದ್ದರಿಂದ ಭಾರಿ ಅನಾಹುತಗಳು ತಪ್ಪಿವೆ. ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ಸಮಸ್ಯೆ ಉಂಟಾಯಿತು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು ಬಿದ್ದಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಕೂಡಲೆ ವಿದ್ಯುತ್ ಇಲಾಖೆಯ ಸಿಬ್ಬಂದಿ ತುರ್ತು ದುರಸ್ತಿ ಕಾರ್ಯ ಮಾಡಿದ್ದಾರೆ. ಅಲ್ಲದೆ ನಗರದ ಗಡಾದ ಆಸ್ಪತ್ರೆ ಬಳಿ ಮರದ ಕೆಳಗೆ ನಿಲ್ಲಿಸಿದ ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ. ಮಳೆ ಬಂದ ಸಮಯದಲ್ಲಿ ಆಟೋ ಮಾಲೀಕ ಆಟೋ ಮರದ ಕೆಳಗೆ ನಿಲ್ಲಿಸಿದ್ದರು. ಈ ಸಮಯದಲ್ಲಿ ಭಾರಿ ಗಾಳಿಮಳೆಗೆ ಮರ ಬಿದ್ದಿದೆ. ಇದರಿಂದ ಆಟೋ ಕಳೆದುಕೊಂಡ ಮಾಲೀಕ ಜಬೀಯುಲ್ಲಾ ಕಂಗಾಲಾಗಿದ್ದಾರೆ.

Leave a Reply

Your email address will not be published. Required fields are marked *