ಸುದ್ದಿ ಸಂಗ್ರಹ ಚಿತ್ತಾಪುರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸರ್ವಾಧಿಕಾರಿ. ಎಫ್ ಸ್ಟೀನ್ ಫೈಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಬಂದಿರುವುದರಿಂದ ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯುವ ಗುಲಾಮರಾಗಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ರವಿವಾರ ಆಯೋಜಿಸಿದ್ದ 1069 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಚಹಾ ಕುಡಿಯುವ ಸಮಯಕ್ಕೆ ಟ್ರಂಪ್ ಅವರೊಂದಿಗೆ ಮಾತನಾಡುವುದಾಗಿ ಮೋದಿ ಹೇಳುತ್ತಾರೆ. ಅಷ್ಟೊಂದು ಸ್ನೇಹ ಇದ್ದರೆ ನಮ್ಮ ದೇಶದ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಹೇರುತ್ತಿರುವುದೇಕೆ ? ಯಾವ ದೇಶದೊಂದಿಗೆ ವ್ಯವಹಾರ ಮಾಡಬೇಕು ಎಂದು ಹೇಳುತ್ತಿರುವುದೇಕೆ ? ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಲು ಮೋದಿ ಅವರಿಗೆ ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಭಾರತದ ಆಹ್ವಾನದ ಮೇರೆಗೆ ವಿಶಾಖಪಟ್ಟಣದಲ್ಲಿ ಆಯೋಜಿಸಿದ್ದ ನೌಕಾಸೇನಾ ತಾಲೀಮಿನಲ್ಲಿ ಭಾಗವಹಿಸಲು ಇರಾನ್’ನಿಂದ ಬಂದಿದ್ದ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿಯು ಬಾಂಬ್ ದಾಳಿ ನಡೆಸಿ ಮುಳುಗಿಸಿ ಹಲವಾರು ಇರಾನ್ ಸೈನಿಕರ ಸಾವಿಗೆ ಕಾರಣವಾಗಿದೆ. ಅಷ್ಟೊಂದು ಧೈರ್ಯ ಅವರಿಗೆ ಹೇಗೆ ಬಂತು ? ಇದನ್ನು ಪ್ರಶ್ನಿಸುವ ಎದೆಗಾರಿಕೆಯೂ ದೇಶದ ಪ್ರಧಾನಿಗೆ ಇಲ್ಲವೆ ? ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ವೇಳೆ ಅಮೆರಿಕದ ಯುದ್ಧ ನೌಕೆಯನ್ನು ಕಳುಹಿಸಿ ಭಾರತವನ್ನು ಬೆದರಿಸಲು ನೋಡಿತು. ಆದರೆ ಇಂದಿರಾಗಾಂಧಿಯವರು ಅಮೆರಿಕದ ಬೆದರಿಕೆಗೆ ಮಣಿಯಲಿಲ್ಲ. ಆದರೆ ಮೋದಿ ಏಕೆ ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡುತ್ತಿದ್ದಾರೆ, ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಅಲಿಪ್ತ ನೀತಿಯನ್ನು ಅನುಸರಿಸಿದ್ದರಿಂದ ವಿಶ್ವಶಾಂತಿಗೆ ಕಾರಣವಾಗಿತ್ತು, ಆದರೆ ಈಗ ಮೋದಿ ಮಾಡುತ್ತಿರುವುದೆನು ? ಮೋದಿ ಇಸ್ರೇಲ್‌ಗೆ ಹೋಗಿ ಕೊರಳಲ್ಲಿ ಒಂದು ಬಿಲ್ಲೆ ಹಾಕಿಕೊಂಡು ಬಂದ ನಂತರ ಇಸ್ರೇಲ್ ಇರಾನ್ ಮೇಲೆ ಬಾಂಬ್ ಹಾಕಿತು. ದೇಶದ ಮುಖ್ಯಸ್ಥ ಖಮೇನಿ ಅವರನ್ನು ಅಮೆರಿಕ- ಇಸ್ರೇಲ್ ಪಡೆಗಳು ಹತ್ಯೆ ಮಾಡಿದವು, ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದೆಯೆ ? ಇದು ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ ? ಎಂದು ಖರ್ಗೆ ಪ್ರಶ್ನಿಸಿದರು.
ಭಾರತ ದೇಶದ ಶೇ.65ರಷ್ಟು ರೈತರು ಕೃಷಿ ಅವಲಂಬಿತರಾಗಿದ್ದಾರೆ, ಅಮೆರಿಕದಲ್ಲಿ ಶೇ.3ರಷ್ಟು ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಆಮೆರಿಕದಲ್ಲಿ ಭಾರಿ ತೆರಿಗೆ ಹಾಕುತ್ತಾರೆ, ಆದರೆ ಅಮೆರಿಕದ ಉತ್ಪನ್ನಗಳಿಗೆ ನಾವು ತೆರಿಗೆ ಹಾಕುವಂತಿಲ್ಲ, ನಾವು ಯಾರಿಂದ ತೈಲ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕವೇ
ನಿರ್ಧರಿಸುವುದಾದರೆ ಮೋದಿ ಟ್ರಂಪ್ ಅವರ ಸ್ನೇಹಿತರಾಗಿ ಏನು ಪ್ರಯೋಜನ ಎಂದರು.