ಸುದ್ದಿ ಸಂಗ್ರಹ ವಾಡಿ
ತಾಯಿಯ ಅನಾರೋಗ್ಯದ ಕಾರಣಕ್ಕೆ ತರಾತುರಿಯಲ್ಲಿ 16 ವರ್ಷದ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರ ಕುರಿತು ಮಕ್ಕಳ ಸಹಾಯವಾಣಿಗೆ ಬಂದ ಕರೆಯನ್ನು ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಮದುವೆಯನ್ನು ಶುಕ್ರವಾರ ರದ್ದು ಮಾಡಿದ್ದಾರೆ.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಮನೆ ಇದೆ. ಸೇಡಂ ತಾಲೂಕಿನ ವಜ್ರಗಾಂವ ಗ್ರಾಮದಲ್ಲಿ ಅದೆ ಗ್ರಾಮದ ಯುವಕನೊಂದಿಗೆ ಬಾಲಕಿಯ ಮದುವೆ ಜೂನ್ 20ರಂದು ನಿಶ್ಚಯವಾಗಿತ್ತು. ಶುಕ್ರವಾರ ಬಾಲಕಿಯನ್ನು ಉಡಿ ತುಂಬಿ ವರನ ಮನೆಗೆ ಕಳುಹಿಸಿ ಕೊಡುವ ಕಾರ್ಯಕ್ರಮ ನಡೆಯುತ್ತಿತ್ತು.
ದೂರನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ಗುರಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ ಗುಂಡಗುರ್ತಿ, ವಲಯ ಮೇಲ್ವಿಚಾರಕಿ ಗಂಗಾ ನವೀಂದ್ರಕರ, ಪಿಡಿಓ ಕಲ್ಯಾಣಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ಶಾಲಾ ದಾಖಲಾತಿ ಮತ್ತು ಆಧಾರ್ ಕಾರ್ಡ್ ಪರಿಶೀಲಿಸಿದಾಗ ಬಾಲಕಿಗೆ 16 ವರ್ಷ ಇರುವುದು ಗೊತ್ತಾಗಿ ಮದುವೆ ನಿಲ್ಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಬಾಲಕಿಯ ತಾಯಿಗೆ ಅನಾರೋಗ್ಯ ಎಂದು ಸಂಬಂಧಿಕರು ಮದುವೆ ಮಾಡುತ್ತಿದ್ದರು ಎನ್ನಲಾಗಿದೆ.
ನಂತರ ಬಾಲಕಿಯನ್ನು ಕಲಬುರಗಿ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಾದ ಶೇಖಮ್ಮ ಕುರಿ, ಮಲ್ಲಮ್ಮ ಮರ್ತುರಕರ, ಶಾಂತಾ ಶೆಳ್ಳಗಿ, ಪಾರ್ವತಿ ಕಟ್ಟಿಮನಿ, ಲಕ್ಷ್ಮಿ ಮಾಡಗಿ, ಅಣ್ಣೆಮ್ಮಾ ಹೊರಂಚಿ ಮತ್ತು ಸೌಮ್ಯ ಇದ್ದರು.