ಶೋಕಿಗಾಗಿ ಸಾಲ-ಕುಕೃತ್ಯಕ್ಕಿಳಿದ ಖಾಕಿ ಭಾತ್ಮಿದಾರ: ಭೀಮಾತೀರದ ಹಲಸಂಗಿ ದರೋಡೆ ಪ್ರಕರಣ, ತನಿಖೆಯಲ್ಲಿ ಕುತೂಹಲಕಾರಿ ಅಂಶ ಪತ್ತೆ
ಸುದ್ದಿ ಸಂಗ್ರಹ ವಿಜಯಪುರ
ಪೊಲೀಸ್ ಆಗಬೇಕೆಂಬ ಕನಸು ಹೊತ್ತು, ನಿತ್ಯ ಬೆವರು ಸುರಿಸಿ, ನರನಾಡಿಗಳೆಲ್ಲ ಹುರಿಗೊಳಿಸಿ, ನೂರಾರು ಯುವಕರಿಗೆ ಮಾರ್ಗದರ್ಶಿಯಾಗಿದ್ದ ಶೋಕಿಲಾಲನೋರ್ವ ಐಷಾರಾಮಿ ಬದುಕಿಗಾಗಿ ಮಾಡಿದ ಸಾಲ ತೀರಿಸಲಾಗದೇ ದರೋಡೆ ಕೃತ್ಯಕ್ಕಿಳಿದ ಕುತೂಹಲಕಾರಿ ಅಂಶ ಭೀಮಾತೀರದಲ್ಲಿ ಬೆಳಕಿಗೆ ಬಂದಿದೆ.
ಕಳೆದ ಜ. 26 ರಂದು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಭೀಮಾತೀರದ ಅನತಿ ದೂರದಲ್ಲಿರುವ ಹಲಸಂಗಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರ ಪೈಕಿ ಓರ್ವನ ಜೀವನಶೈಲಿ ಅತ್ಯಂತ ಕುತೂಹಲದಾಯಕವಾಗಿದೆ. ಸಾಕಷ್ಟು ಓದಿಕೊಂಡು ಡೈರಿ ಕೆಲಸ ಮಾಡುತ್ತಲೇ ಪೊಲೀಸ್ ಇಲಾಖೆಯಲ್ಲಿ ಭಾತ್ಮಿದಾರನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ನೂರಾರು ಯುವಕರಿಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದನಲ್ಲದೇ ತರಬೇತಿ ಕೂಡ ನೀಡುತ್ತಿದ್ದ. ಆದರೆ, ಶೋಕಿ ಬದುಕು ಸಮಾಜದಲ್ಲಿ ಗೌರವ, ಬದುಕಿನಲ್ಲಿ ನೆಮ್ಮದಿ ಕಸಿದುಕೊಂಡಿತು.
ಅಂದಹಾಗೆ ಆತನ ಹೆಸರು ಹಣಮಂತ ಮಲ್ಲಪ್ಪ ವಾಘೋಲಿ (28). ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಸಂಖದವನಾದ ಈತ ಪುಣೆಯ ಪಿಂಪ್ರಿಚಿಂಚವಾಡದ ಮೋರಯ್ಯ ಕಾಲನಿಯ ಲೋಂಡೆ ವಸತಿಯಲ್ಲಿ ವಾಸವಾಗಿದ್ದಾನೆ. ದರೋಡೆ ಕೃತ್ಯದಲ್ಲಿ ಈತನಿಗೆ ಸಾಥ್ ನೀಡಿದ ಇನ್ನೋರ್ವ ಆರೋಪಿ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಶಿವರಾಜ್ ಊರ್ಫ್ ಗೌಡಪ್ಪ ರಾವುಸಾಹೇಬ ನಾವಿ (28). ವೃತ್ತಿಯಲ್ಲಿ ಈತ ಚಾಲಕ.
ಚಡಚಣ ತಾಲೂಕಿನ ಹಲಸಂಗಿಯಲ್ಲಿ ಜ. 26 ರಂದು ಮಧ್ಯಾಹ್ನ 3.30ರ ಸುಮಾರಿಗೆ ಮಹಾರುದ್ರ ಸದಾಶಿವ ಕುಂಚಗಾರ ಎಂಬುವರ ಭೂಮಿಕಾ ಜುವೆಲರಿ ಶಾಪ್‌ನಲ್ಲಿ ನಡೆದ ದರೋಡೆ ಕೃತ್ಯ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕಪ್ಪು ಬಣ್ಣದ ಹೋಂಡಾ ಯುನಿಕಾರ್ನ್ ಬೈಕ್ ಮೇಲೆ ಕಪ್ಪುಬಣ್ಣದ ಜಾಕೆಟ್, ಹೆಲ್ಮೆಟ್ ಧರಿಸಿ ಬಂದ ಬಂಧಿತ ಆರೋಪಿಗಳು ಅಂಗಡಿ ಮಾಲೀಕ ಮಹಾರುದ್ರನಿಗೆ ಗನ್ ತೋರಿಸಿದ್ದಾರೆ. ಆತನ ಅಂಗಡಿಯಲ್ಲಿದ್ದ 205 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ ದೋಚಿ ಪರಾರಿಯಾಗಿದ್ದರು.
ಇದೇ ಸಂದರ್ಭ ಪಕ್ಕದ ಮೊಬೈಲ್ ಅಂಗಡಿಯವನಾದ ಅನಿಲ್ ಬಸಣ್ಣ ಗಲಗಲಿ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಆತನ ಕಡೆಗೆ ಗುಂಡು ಹಾರಿಸಿದ್ದರು. ಆ ಗುಂಡು ಅನಿಲ್‌ನ ಪಕ್ಕದಲ್ಲಿದ್ದ ಆತ್ಮಲಿಂಗ ಸಂಗಪ್ಪ ಹೂಗಾರ (18) ಎಂಬಾತನ ಕಾಲಿಗೆ ತಗುಲಿ ಗಾಯಗೊಳಿಸಿತ್ತು.
ಪೊಲೀಸರ ಕಾರ್ಯಾಚರಣೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಎಎಸ್‌ಪಿ ರಾಮನಗೌಡ ಹಟ್ಟಿ ಮೇಲ್ವಿಚಾರಣೆ ಮತ್ತು ಇಂಡಿ ಡಿಎಸ್‌ಪಿ ಸದಾಶಿವ ಕಟ್ಟಿಮನಿ, ಡಿಎಸ್‌ಪಿ ಸುನೀಲ ಕಾಂಬಳೆ ನೇತೃತ್ವದಲ್ಲಿ ಸಿಪಿಐ ಪರಶುರಾಮ ಮನಗೂಳಿ, ಪಿಎಸ್‌ಐ ಮಂಜುನಾಥ ತಿರಕ್ಕನವರ, ಸೋಮೇಶ ಗೆಜ್ಜಿ, ರಾಕೇಶ ಬಗಲಿ ಅವರನ್ನೊಳಗೊಂಡು ಎರಡು ಪ್ರತ್ಯೇಕ ತನಿಖಾ ತಂಡ ರಚಿಸಿದ್ದರು. ಈ ತಂಡ ಕೇವಲ 20 ದಿನಗಳ ಅವಧಿಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಸಫಲರಾಗಿದ್ದಾರೆ.
ಚಿನ್ನಾಭರಣ-ಪಿಸ್ತೂಲ್ ವಶ
ಒಟ್ಟು 205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿಯ ಆಭರಣಗಳು ಸೇರಿ 22 ಲಕ್ಷ ರೂ.ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಅಲ್ಲದೇ, ಕೃತ್ಯಕ್ಕೆ ಬಳಸಿದ 3 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು, ಒಂದು ಏರ್‌ಗನ್, ಹೊಂಡಾ ಕಂಪನಿಯ ಯುನಿಕಾರ್ನ್ ಮೋಟರ್ ಸೈಕಲ್, ಮಾಸ್ಕ್, ಜಾಕೇಟ್, ಹೆಲ್ಮೇಟ್, ಹ್ಯಾಂಡ್‌ಗ್ಲೌಸ್ ಹಾಗೂ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲಸಂಗಿ ಕೃತ್ಯಕ್ಕೂ ಮುನ್ನ ಸೋಲಾಪುರದಲ್ಲಿ ದರೋಡೆಗೆ ಯತ್ನಿಸಿದ್ದ ಬಂಧಿತ ಆರೋಪಿಗಳು ಅಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣಕ್ಕೆ ವಾಪಸ್ ಆಗಿದ್ದಾರೆ. ಮಾರ್ಗಮಧ್ಯೆ ಧೂಳಖೇಡದಲ್ಲೂ ಪ್ರಯತ್ನಿಸುವ ಆಲೋಚನೆ ಇಟ್ಟುಕೊಂಡಿದ್ದರಾದರೂ ಅಲ್ಲೂ ಕಾರ್ಯಗತಗೊಂಡಿಲ್ಲ. ಕೊನೆಗೆ ಹಲಸಂಗಿಯಲ್ಲಿ ಮಧ್ಯಾಹ್ನ ಜನದಟ್ಟಣೆ ಕಡಿಮೆ ಇರುವ ಕಾರಣಕ್ಕೆ ದರೋಡೆ ನಡೆಸಿದ್ದಾರೆ. ಈ ಕೃತ್ಯಕ್ಕಾಗಿ ಗೋರಖಪುರದಿಂದ ತಂದ ಕಂಟ್ರಿ ಪಿಸ್ತೂಲ್ ಬಳಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅಲ್ಲದೇ, ತನಿಖಾ ತಂಡದಲ್ಲಿ ಪೊಲೀಸರ ಕಾರ್ಯ ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿದರು.