ಸುದ್ದಿ ಸಂಗ್ರಹ ಕಾಳಗಿ
ಮನುಷ್ಯತ್ವ, ಸಂಸ್ಕಾರ ರೂಪಿಸಲು ಶಾಲೆಗಳಿಂದ ಸಾಧ್ಯವಿಲ್ಲ, ಧಾರ್ಮಿಕ ಚಟುವಟಿಕೆಗಳು ಸಹ ಸೌಹಾರ್ದತೆ ಮೂಡಿಸಿ ಬಲವಾದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಟೆಂಗಳಿ- ಮಂಗಲಗಿಯ ಶಾಂತೇಶ್ವರ ಹಿರೇಮಠದ ಧರ್ಮಾಧಿಕಾರಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು.
ತಾಲೂಕಿನ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಬುಧವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ, ಶ್ರೀ ಶಾಂತವೀರ ಶಿವಾಚಾರ್ಯರ ದರ್ಶನಂ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ, ಅತಿಥಿ ದೇವೋ ಭವ ಇವುಗಳನ್ನು ನಿಮಮದಂತೆ ಪಾಲನೆ ಮಾಡಬೇಕು ಹಾಗೂ ಮನೆಗೆ ಬರುವ ಅತಿಥಿಗಳಿಗೆ ಸತ್ಕರಿಸುವದು, ಅವರ ವಿಚಾರಗಳು ಆಲಿಸುವದು, ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದರೆ ಉತ್ತಮ ಜೀವನ ಸಾಧ್ಯ ಎಂದರು.
ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ದೇವಾಲಯ ಹಾಗೂ ಧಾರ್ಮಿಕ ಆಚರಣೆಗಳು ಸಹಕಾರಿಯಾಗಿವೆ ಹಾಗೂ ದೇವರು, ಗುರು-ಹಿರಿಯರು ಮತ್ತು ಧರ್ಮವನ್ನು ಗೌರವಿಸಿ ಮುನ್ನಡೆದರೆ ಯಶಸ್ಸು ಸಾಧ್ಯ. ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದರು.
ಪುರಾಣ ಆಲಿಸಿದರೆ ಸಾಲದು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕಥಾ ಶ್ರವಣ ಮಾನವ ಜೀವನಕ್ಕೆ ದಾರಿದೀಪವಾಗಿದ್ದು ಅದರ ಸಾರಾಂಶ ಅರಿತು ಬದುಕು ಸಾಗಿಸಬೇಕು. ಜನರು ಧಾರ್ಮಿಕ ಭಾವನೆಗಳಲ್ಲಿ ನಂಬಿಕೆ ಇಟ್ಟಿರುವುದರಿಂದ ಅವರಲ್ಲಿ ಉತ್ತಮ ಗುಣಗಳನ್ನು ಉದಾತ್ತಗೊಳಿಸಲು ಪುರಾಣ ಪ್ರವಚನ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಪುರಾಣ ಪ್ರವಚನ ಸೂರ್ಯಕಾಂತ ಶಾಸ್ತ್ರಿ ಪುರಾಣ ಪಠಣ ಮಾಡಿದರು, ಸಂಗೀತ ಗುರುಶಾಂತಯ್ಯ ಸ್ಥಾವರಮಠ, ತಬಲಾ ವೀರಭದ್ರಯ್ಯ ಸ್ಥಾವರಮಠ ಸೇವೆ ಸಲ್ಲಿಸಿದರು.
ಮುಖಂಡರಾದ ವಿಜಯಕುಮಾರ ತುಪ್ಪದ, ಭೀಮಾಶಂಕರ ಮಾಲಿಪಾಟೀಲ, ಉದಯಕುಮಾರ ಪಟ್ಟೇದ, ಶಾಮರಾವ ಮಾಲಿಪಾಟೀಲ, ರೇವಶೆಟ್ಟಿ ಮಲಕೂಡ, ಜಗದೀಶ ಪಟ್ಟೇದ, ಮಂಗಲಗಿ ಗ್ರಾಮದ ಶಾಂತಕುಮಾರ ಮಾಲಿಪಾಟೀಲ, ನಾಗಯ್ಯ ಒಂಟೆತ್ತಿ, ನೀಲಕಂಠರಾವ ಮರಗೋಳ, ರಮೇಶ ಜಾಧವ, ವೀರಣ್ಣ ಭೂತಪೂರ, ಶ್ರೀಕಾಂತ ಕಲಬುರಗಿ, ರವಿ ಧೂಳಗುಂಡಿ, ವಿಜಯಕುಮಾರ ಮರಗೋಳ ಸೇರಿದಂತೆ ಟೆಂಗಳಿ ಮತ್ತು ಮಂಗಲಗಿ ಗ್ರಾಮದ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಮಾದೇವಿ ಚೆಂಗಟಿ ಸ್ವಾಗತಿಸಿದರು, ಬಸವರಾಜ ಭೈರಿ ನಿರೂಪಿಸಿದರು.