ಚಿತ್ತಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೋಲಿ, ಕಬ್ಬಲಿಗ ಜಾತಿಯವರು ಕಡ್ಡಾಯವಾಗಿ ಜಾತಿ ಕಬ್ಬಲಿಗ ಎಂದು, ಉಪ ಜಾತಿ ಕೋಲಿ ಎಂದು ಬರೆಯಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ಗೌರವಾಧ್ಯಕ್ಷ ರಾಮಲಿಂಗ ಬಾನರ ಸಮಾಜದ ಜನರಿಗೆ ಕರೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆ ಮಾಡಲು ಮನೆ ಮನೆಗೆ ಸಮೀಕ್ಷೆದಾರರು ಬಂದಾಗ ಧರ್ಮ ಕೇಳಿದಾಗ ಹಿಂದೂ ಎಂದು, ಜಾತಿ ಕೇಳಿದಾಗ ಕಬ್ಬಲಿಗ ಎಂದು (ಕಾಲಂ ನಂ.9 ರಲ್ಲಿ A-0588) ಬರೆಯಿಸಬೇಕು. ಉಪ ಜಾತಿ ಕೇಳಿದಾಗ ಕೋಲಿ (ಕಾಲಂ10 ರಲ್ಲಿ A-0712 ) ಎಂದು ಬರೆಯಿಸಬೇಕು. ಸಮೀಕ್ಷೆದಾರರು ಪೆನ್ಸಿಲ್ ಬಳಸಿ ಬರೆದುಕೊಳ್ಳುತ್ತಿದ್ದರೆ ಅದಕ್ಕೆ ಆಕ್ಷೇಪಿಸಿ ಪೆನ್ನಿನಿಂದ ಬರೆದುಕೊಳ್ಳುವಂತೆ ಒತ್ತಾಯಿಸಬೇಕು ಎಂದರು.
ಕಾಲಂ ನಂ.11 ರಲ್ಲಿ ಕಬ್ಬಲಿಗ ಜಾತಿಯ ಪರ್ಯಾಯ ಪದ (C-22.2) ಟೋಕರೆ ಕೋಲಿ ಎಂದು ಬರೆಯಿಸಬೇಕು. ಪ್ರತಿಯೊಬ್ಬರು ಶಾಲಾ ದಾಖಲಾತಿಯಲ್ಲಿ ಇರುವಂತೆ ತಮ್ಮ ಜಾತಿಯನ್ನು ಬರೆಯಿಸಬೇಕು. ಜಾತಿ ನಮೂದಿಸುವಾಗ ಜಾಗ್ರತೆ ವಹಿಸಿ ನೋಡಬೇಕು. ಸಮೀಕ್ಷೆದಾರರು ತಪ್ಪಾಗಿ ನಮೂದಿಸಿದ್ದರೆ ಅದನ್ನು ಅಳಿಸಿ ಸರಿಯಾಗಿ ನಮೂದಿಸುವಂತೆ ತಿಳಿಸಬೇಕು ಎಂದರು.
ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಮೀಕ್ಷೆಯಿಂದ ಜಾತಿಯ ಸಮಗ್ರ ಮಾಹಿತಿ ದಾಖಲಾಗುತ್ತದೆ ಮತ್ತು ಜಾತಿಯ ಜನಸಂಖ್ಯೆ ಎಷ್ಟಿದೆ ಎಂಬುದು ನಿಖರ ಅಂಕಿಸಂಖ್ಯೆ ಲಭಿಸುತ್ತದೆ. ಭವಿಷ್ಯದಲ್ಲಿ ಜನಸಂಖ್ಯೆ ಆಧಾರಿತವಾಗಿ ಸರ್ಕಾರದಿಂದ ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು, ರಾಜಕೀಯವಾಗಿ ಸ್ಥಾನಮಾನ, ಸಾಮಾಜಿಕ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ ಮತ್ತು ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ್ ತಿಳಿಸಿದ್ದಾರೆ.