ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಪರಮ ಪೂಜ್ಯರ ಸಾನಿಧ್ಯದಲ್ಲಿ ಡಿಸೆಂಬರ್ 28ರಿಂದ ಜನವರಿ 3ರವರೆಗೆ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ರಾಮಲಿಂಗ ಚೌಡೇಶ್ವರಿ ಮತ್ತು ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜರುಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜ ರಾಜೋಳ್ಳಿ ಮತ್ತು ಉಪಾಧ್ಯಕ್ಷ ರಾಜಶೇಖರ ಬಳ್ಳಾ ತಿಳಿಸಿದ್ದಾರೆ.
ಡಿ.30 ರಂದು ಸಂಜೆ 7.30ಕ್ಕೆ ಉಡಿ ತುಂಬುವ ಕಾರ್ಯಕ್ರಮ, ಜನವರಿ 1 ರಂದು ಸಂಜೆ 7.30ಕ್ಕೆ ಸಹಸ್ರ ದೀಪೋತ್ಸವ, ಜ.3 ರಂದು ಸಂಜೆ 5ಕ್ಕೆ ಪಲ್ಲಕ್ಕಿ ಹಾಗೂ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ
ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದ್ದಾರೆ.
ಜ.2 ರಂದು ಬೆಳಿಗ್ಗೆ 6.30ಕ್ಕೆ ಶಂಕ್ರಯ್ಯಸ್ವಾಮಿ ದೇವಾಂಗ ಮಠ, ಕಾಳಗಿ ಗುರುಗಳ ನೇತೃತ್ವದಲ್ಲಿ ಬನಶಂಕರಿ ದೇವಿಗೆ ಮಹಾಮಸ್ತಕಾಭಿಷೇಕ ಜರುಗಲಿದೆ. ನಂತರ 9 ಗಂಟೆಗೆ ಬಸವರಾಜ ರಾಜೋಳ್ಳಿ ಅವರ ಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನವರೆಗೆ ಕುಂಭ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಗುರುಲಿಂಗಪ್ಪ ಅಲ್ಲಂ ಅವರ ಮನೆಯ ಬಾವಿಗೆ ಪೂಜೆ ಸಲ್ಲಿಸಿ ಗಂಗಸ್ಥಳ ಕಾರ್ಯಕ್ರಮ ನೆರವೇರಲಿದೆ.
ಮಧ್ಯಾಹ್ನ 3 ಗಂಟೆಗೆ ಮುತ್ತೈದೆಯರ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ, ರಾತ್ರಿ 10 ರಿಂದ ಬೆಳಗಿನ ಜಾವದವರೆಗೆ ಭಜನಾ ಕಾರ್ಯಕ್ರಮ ಜರುಗಲಿದೆ.
ಜ.3 ರಂದು ಬೆಳಿಗ್ಗೆ 6.30ಕ್ಕೆ ಬನಶಂಕರಿ ದೇವಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಮಧ್ಯಾಹ್ನ 12.15ಕ್ಕೆ ಮುತ್ತೈದೆಯರ ಸೇವೆ ನಂತರ ಪ್ರಸಾದ ವಿತರಿಸಲಾಗುವುದು. ಸಂಜೆ 5 ಗಂಟೆಗೆ ಮನೋಹರ ವಿಶ್ವಕರ್ಮ ತಂಡದ ನೇತೃತ್ವದಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಬನಶಂಕರಿ ದೇವಿಯ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ಸಾಗಿ, ಚೌಡೇಶ್ವರಿ ದೇವಸ್ಥಾನದಲ್ಲಿ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಿಯ ಸದ್ಭಕ್ತರು ಹಾಗೂ ಸಮಾಜ ಬಾಂಧವರು ಕುಟುಂಬ ಸಮೇತ ಭಾಗವಹಿಸಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.