ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭೀಮಾತೀರದಲ್ಲಿ ಆತಂಕ ಮೂಡಿಸಿದೆ.
ಮಹಾರಾಷ್ಟ್ರದ ಉಜನಿ, ವೀರಾ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ. ಇದರಿಂದಾಗಿ ವಿಜಯಪುರ ಜಿಲ್ಲೆಯ ಭೀಮಾನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಅಲಮೇಲ ತಾಲೂಕಿನ ದೇವಣಗಾಂವನ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಹಳೆಯ ತಾವರಖೇಡ ಗ್ರಾಮದ ಮನೆಗಳಿಗೂ ನೀರು ನುಗ್ಗಿದೆ.
ಕಲಬುರಗಿಯ ಗಾಣಗಾಪೂರದ ಸಂಗಮ ಕ್ಷೇತ್ರದ ಪಾರಾಯಣ ಮಂಟಪ, ಫತ್ತರಗ ಗ್ರಾಮದ ಪಶುಸಂಗೋಪನಾ ಆಸ್ಪತ್ರೆಗೂ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ಜೇವರ್ಗಿ ತಾಲೂಕಿನ ಮಾಹೂರ ಗ್ರಾಮದ ಸಂರ್ಪಕ ಕಡಿತಗೊಂಡಿದೆ. ಪ್ರವಾಹವನ್ನೂ ಲೆಕ್ಕಿಸದೆ ಪೋಷಕರು ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ಶಾಲೆಗೆ ಕಳುಹಿಸಿದ್ದಾರೆ. ಕಲಬುರಗಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರುನ್ನುಮ್ ಭೇಟಿ ನೀಡಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಅಂತಾ ಡಿಸಿ ಫೌಜಿಯಾ ಕಾಲಿಗೆ ಬಿದ್ದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಭೀಮಾನದಿಗೆ 3.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.