ಸುದ್ದಿ ಸಂಗ್ರಹ ಚಿತ್ತಾಪುರ
ಹೆಣ್ಣು ತಾಳ್ಮೆ, ಕ್ಷಮೆ, ದೃಢತೆ ಮತ್ತು ಧೈರ್ಯಶಾಲಿಯಾದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಯಾವದು ಇಲ್ಲ, ಮನೆ ನಡೆಸುವ ಹೆಣ್ಣು ರಾಷ್ಟ್ರವನ್ನು ನಡೆಸಬಲ್ಲಳು ಎಂದು ನರ್ಮದಾ ಗಿಲಡಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಗದೀಶ್ವರಿ ಯರಗೋಳ ಹೇಳಿದ್ದಾರೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಪ್ರಾರ್ಥನಾ ಪೂರ್ವ ಪ್ರಾಥಮಿಕ ಶಾಲೆ, ವೀರಭದ್ರೇಶ್ವರ ಪ್ರಾಥಮಿಕ ಶಾಲೆ ಮತ್ತು ವಸತಿ ಪ್ರೌಢ ಶಾಲೆಯ ಆವರಣದಲ್ಲಿ ಶನಿವಾರ ಮಾತೆಯರಿಗಾಗಿ ಆಯೋಜಿಸಿದ್ದ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಭಾರತೀಯ ಸಂಪ್ರದಾಯವನ್ನು ಪ್ರಸ್ತುತ ಮಹಿಳೆಯರು ಮರೆಯುತಿದ್ದಾರೆ ಎಂದು ಕಳವಳದಿಂದ ನುಡಿದ ಅವರು, ಹೀಗಾಗಿ ತಾಯಿ ಗಟ್ಟಿಯಾಗ ಬೇಕಾಗಿದೆ. ತಾಯಿಯಿಂದಲೆ ಮಕ್ಕಳಿಗೆ ಮೊದಲ ಶಿಕ್ಷಣ, ತಾಯಿ ಶಿಕ್ಷಣವೇ ಮಕ್ಕಳಿಗೆ ಭದ್ರ ಬುನಾದಿ ಎಂದರು.
ತಾಯಿಯಾದವಳು ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮಕ್ಕಳಿಗೆ ಕಲಿಸಿ ಕೊಡಬೇಕು. ಸಂಪ್ರದಾಯ ಮತ್ತು ಸಂಸ್ಕೃತಿ ಪಿಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತದೆ. ನಮ್ಮನ್ನು ನೊಡಿ ಮಕ್ಕಳು ಕಲಿಯುತ್ತಾರೆ. ನಮ್ಮ ನುಡಿ ಮತ್ತು ವರ್ತನೆ ಮಕ್ಕಳ ಮೇಲೆ ಪ್ರಭಾವ ಬಿರುತ್ತದೆ. ಆದಕಾರಣ ತಾಯಿಯಾದವಳು ಮನೆ ನಡೆಸುವ ಜವಾಬ್ದಾರಿಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿಸುವ ಕೆಲಸ ಮಾಡಬೇಕಿದೆ. ಮಹಿಳೆಯರಲ್ಲಿನ ವಾಕ್, ಸ್ಮೃತಿ, ಮೇಧಾ, ದೃತಿ, ಕ್ಷಮ ಮತ್ತು ಕೀರ್ತಿಯಂಥ ಸಪ್ತ ಶಕ್ತಿಯನ್ನು ಜಾಗೃತಿ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ನರ್ಮದಾ ಗಿಲ್’ಡಾ ಕನ್ಯಾ ಪ್ರೌಢ ಶಾಲೆಯ ಮುಖ್ಯಗುರು ಅನಂತಮ್ಮ ರೆಡ್ಡಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗುತ್ತಿವೆ, ಮೊಬೈಲ್ ಮತ್ತು ಸಾಮಾಜಿಕ
ಜಾಲತಾಣದಿಂದ ಮಕ್ಕಳನ್ನು ದೂರವಾಗಿಡಬೇಕು. ನಮ್ಮ ಸಂಸ್ಕೃತಿ, ಹಬ್ಬ, ಆಚಾರ ವಿಚಾರಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಪ್ರತಿಯೊಂದು ಹಬ್ಬದ ಹಿನ್ನಲೆ ಅರ್ಥ ಮಾಡಿಸಬೇಕು. ತಾಯಿಯಾದವಳು ಬೆಳೆಯುವ ಮಕ್ಕಳೊಂದಿಗೆ ಗೆಳತಿಯಂತಿರಬೇಕು ಎಂದು
ಪಾಲಕರಿಗೆ ಸಲಹೆ ನೀಡಿದರು.
ಸಂಗೀತ ವೀರಣ್ಣ ಸುಲ್ತಾನಪುರ ಜ್ಯೋತಿ ಬೆಳಗಿಸುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು….ವೇದಿಕೆಯ ಮೇಲೆ ಶಾಲೆಯ ಶಿರಕಿಯರಾದ ರೋಜ್ ಮೇರಿ, ಶರಣಕುಮಾರ ಇದ್ದರು.
ಸಾಧಕರ ವೇಷದಲ್ಲಿ ಗಮನ ಸೆಳೆದ ಮಕ್ಕಳು
ಮಹಿಳೆಯರಿಗಾಗಿ ಆಯೋಜಿಸಲಾದ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ನವರಾತ್ರಿಯ 9 ದುರ್ಗಿಯ ಅವತಾರ, ಕಲ್ಪನಾ ಚಾವ್ಲಾ, ಸಾವಿತ್ರಿ ಬಾ ಫುಲೆ, ಸಾಲುಮರದ ತಿಮ್ಮಕ್ಕ, ಭಾರತ ಮಾತೆ, ಓನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಮದರ್ ತೆರೆಸಾ, ಮೀರಾಬಾಯಿ, ಶರಣೆ ಅಕ್ಕಮಹಾದೇವಿ, ಶಕುಂತಲಾ, ಕಿರಣ್ ಬೇಡಿ, ಸೀತಾ ಮಾತಾ, ಜೀಜಾ ಬಾಯಿ, ಇಂದಿರಾ ಗಾಂಧಿ, ಝಾನ್ಸಿರಾಣಿ ಲಕ್ಷ್ಮಿಬಾಯಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರ ವೇಷದಲ್ಲಿ ಚಿಕ್ಕ ಮಕ್ಕಳು ಕಾರ್ಯಕ್ರಮದ ಗಮನ ಸೆಳೆದರು….ವಿದ್ಯಾರ್ಥಿನಿ ಪೌರ್ಣಮಿ ಮತ್ತು ವೈಷ್ಣವಿಯ ಭರತನಾಟ್ಯ ಆಕರ್ಷಣೆಯಾಗಿತ್ತು.
ಶಿಕ್ಷಕಿಯರಾದ ಶಮಿಮ್, ನಿರ್ಮಲಾ ರಾಠೋಡ, ಅಮೀನಾ ಬೇಗಂ, ಪೂಜಾ ಚವ್ಹಾಣ್, ಸಲ್ಮಾ, ನಾಗಮ್ಮ, ಪೂಜಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಾತೆಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ನಿರೂಪಿಸಿದರು. ಆರ್.ಸುಮನಾ ಸ್ವಾಗತಿಸಿದರು. ಅದಿತಿ ವಂದಿಸಿದರು.