ಕಾಳಗಿ: ವಿಶ್ವ ಪಾರಂಪರಿಕತೆಗೆ ಮುನ್ನುಡಿ ಬರೆಯುವ ಕಾಳಗಿಯ ಚರಿತ್ರೆಯು ವೈಶಿಷ್ಟಪೂರ್ಣವಾಗಿದೆ, ಕಾಳಗಿಯಲ್ಲಿ ಉತ್ಖನನ ಕಾರ್ಯ ನಡೆಯುವ ಮೂಲಕ ಕನ್ನಡ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಬೇಕಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಾಲಯದ ಪರಿಸರದಲ್ಲಿ ಕಲಬುರಗಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾಮಾಯಣ ಕಾಲದಲ್ಲಿ ದಂಡಕಾರಣ್ಯವಾಗಿತ್ತು , ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮನ್ನೆದಡಿ ಸಾಸಿರ ನಾಡು, ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿ, ಅಗ್ರಹಾರವಾಗಿ, ವಿವಿಧ ಧರ್ಮಿಯರು ಬಾಳಿ ಬೆಳಗಿದ ಆಧ್ಯಾತ್ಮದ, ವ್ಯಾಪಾರ ವಾಣಿಜ್ಯ ಕೇಂದ್ರವಾಗಿ ವಿಶ್ವದ ಗಮನ ಸೆಳೆದಿದೆ. ಅಳಿವಿನ ಅಂಚಿನಲ್ಲಿರುವ ಸೂರ್ಯನಾರಾಯಣ ದೇವಾಲಯವು ಕಲ್ಯಾಣ ಕರ್ನಾಟಕದ ಬೇಲೂರು ಹಳೆಬೀಡಾಗಿದೆ. ಶಿಲಾಬಾಲಿಕೆಯರು, ಮದನಿಕೆಯರ ಕಲಾತ್ಮಕ ಶಿಲ್ಪಗಳು ಪ್ರವಾಸಿಗರನ್ನು ಆಕರ್ಶಿಸುತ್ತಿವೆ. ಹೊಯಸ್ಳಳ ಸಾಮ್ರಾಜ್ಯದ ಲಾಂಚನ, ನಾಡಿಗೋಸ್ಕರ ತ್ಯಾಗ ಬಲಿದಾಗೈದ ವೀರನ ಸ್ಮರಣೆಯ ವೀರಗಲ್ಲು, ನೀಲಕಂಠ ಕಾಳೇಶ್ವರ ದೇವಾಲಯ, ಅನಂತಯ ಶಯನ, ಈಶ್ವರ, ಮಲ್ಲಿಕಾರ್ಜುನ ದೇವಾಲಯ, ಜೈನ ಬಸದಿ ಮುಂತಾದ ಸ್ಮಾರಕಗಳು ನಾಡಿನ, ದೇಶದ ಇತಿಹಾಸವನ್ನು ಸಾರುತ್ತವೆ, ಕಾಳಗಿಯ ಇತಿಹಾಸವೆಂದರೆ ಸಮಸ್ತ ಕರುನಾಡಿನ ಇತಿಹಾಸವಾಗಿದೆ. ಇಲ್ಲಿಯ ಸ್ಮಾರಕಗಳ ರಕ್ಷಣೆ ಮಾಡುವ ಹೊಣೆಗಾರಿಕೆಯು ಪ್ರತಿಯೊಬ್ಬರ ಮೇಲಿದೆ. ಕನ್ನಡ ಸಂಸ್ಕೃತಿಯ ಪ್ರತೀಕವಾದ ಕಾಳಗಿಯ ಸ್ಮಾರಕಗಳನ್ನು ರಕ್ಷಿಸುವ ಮೂಲಕ ಕನ್ನಡದ ಕೀರ್ತಿ ಬಾನೆತ್ತರಕೆ ಹಾರಿಸಬೇಕು. ಮತ್ತೆ ಇತಿಹಾಸ ಮರುಕಳಿಸಬೇಕು. ಇಲ್ಲಿಯ ಒಂದೊಂದು ಶಿಲೆಯು ಭವ್ಯ ಇತಿಹಾಸ ಸಾರುತ್ತವೆ. ಇಲ್ಲಿ ಶಾಸನಗಳು ರಾಷ್ಟ್ರದ ಚರಿತ್ರೆ ಬರೆಯಲು ಸಹಕಾರಿಯಾಗುತ್ತದೆ. ನಮ್ಮೂರು ನಮಗೆ ಮೇಲು ಎಂಬ ಅಭಿಮಾನ ಎಲ್ಲರಲ್ಲೂ ಜಾಗೃತವಾದಾಗ ಮಾತ್ರ ನಾಡು, ನುಡಿ ರಕ್ಷಿಸಲು ಸಾಧ್ಯ ಎಂದರು.
ಕಾಳಗಿ ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅವರಿಂದ ಕಾಳಗಿ ತಾಲೂಕಿನ ಪ್ರಮುಖ ಗ್ರಾಮಗಳ ಇತಿಹಾಸ ಪುಸ್ತಕವನ್ನು ಪ್ರಕಟಿಸಲಾಗುವುದು. ಶಾಲಾ ಕಾಲೇಜಗಳಲ್ಲಿ ನಮ್ಮೂರು ನಮಗೆ ಮೇಲು ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಅಧ್ಯಕ್ಷತೆವಹಿಸಿದ್ದ ಬಸವೇಶ್ವರ ಸೇವಾ ಬಳಗದ ಅಧ್ಯಕ್ಷ ಪ್ರೊ. ಹೆಚ್.ಬಿ ಪಾಟೀಲ ಮಾತನಾಡಿ, ಕಳೆದ ಒಂದು ವರ್ಷದಿಂದ ನಮ್ಮ ಬಳಗದ ವತಿಯಿಂದ ಜಿಲ್ಲೆಯ ಐಹಾಸಿಕ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ, ವಿವಿಧ ಗ್ರಾಮಗಳ ಸಹಕಾರದಿಂದ ನಮ್ಮ ಬಿಡುವಿನ ಅವಧಿಯಲ್ಲಿ ಸಮಾಜೋಮುಖಿ ಕಾರ್ಯಗಳನ್ನು ಮಾಡುತ್ತಿದ್ದೆವೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಕಾಳಗಿ ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಸೇರಿದಂತೆ ಅನೇಕರು ಮಾತನಾಡಿದರು.
ಕಾಳಗಿಯು ಕಲ್ಯಾಣ ಕರ್ನಾಟಕದ ಬೇಲೂರು – ಹಳೆಬೀಡಾಗಿದೆ. ಕಲಾ ವಾಸ್ತು ಶಿಲ್ಷಗಳು, ಶಾಸನ, ಸ್ಮಾರಕಗಳು ನಾಡು, ದೇಶ ಮತ್ತು ಪ್ರಪಂಚದ ಇತಿಹಾಸ ಬರೆಯಲು ಪ್ರೇರಣೆ ನೀಡುತ್ತವೆ. ಕಾಳಗಿಯ ಇತಿಹಾಸವು ವಿಶ್ವ ಪಾರಂಪರಿಕತೆಗೆ ಮುನ್ನುಡಿ ಬರೆಯುತ್ತವೆ. ರಾಮಾಯಣದಲ್ಲಿ ದಂಡಕಾರಣ್ಯ, ಶಾಸನಗಳ ಪ್ರಕಾರ ಮನ್ನೆದಡಿ ಸಾಸಿರ ನಾಡಿಗೆ(ಸಾವಿರ ಹಳ್ಳಿಗಳಿಗೆ) ರಾಜಧಾನಿಯಾಗಿತ್ತು. ಧರ್ಮ, ಆಧ್ಯಾತ್ಮದ ತವರೂರು, ಪುರಾಣ ಪ್ರಸಿದ್ದ, ವ್ಯಾಪಾರ ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿದೆ ವಿಶ್ವದ ಗಮನ ಸೆಳೆದಿದೆ.
- ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿ
ಗೌರವ ಕಾರ್ಯದರ್ಶಿ ಯಲ್ಲಾಲಿಂಗ ಪಾಟೀಲ, ಸತೀಶ್ಚಂದ್ರ ಸುಲೇಪೇಟ, ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಬಾಬು, ಸೇಡಂ ಕಸಾಪ ಗೌರವ ಕಾರ್ಯದರ್ಶಿ ಪ್ರಕಾಶ ಗೊಣಗಿ, ಸೇಡಂ ಕಸಾಪ ಮಾಜಿ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಪ್ರಮುಖರಾದ ಶರಣು ಮೇಲಕೇರಿ, ಮಲ್ಲಿಕಾರ್ಜುನ ಹಂದ್ರಾಳ, ಬಸವರಾಜ ಕಂಠಿ, ವಿಠಲ ಪೂಜಾರಿ, ರೇವಣಸಿದ್ದಯ್ಯ ಸೋಬಾನ, ನಾಗಮಲ್ಲಿನಾಥ ಕಿರಣಗಿ, ಚಂದ್ರಕಾಂತ ಗೊಣಗಿ, ಜಗದೀಶ ಮಠಪತಿ ಸೇರಿದಂತೆ ಅನೇಕರು ಇದ್ದರು.