ಪ್ಯಾಂಟ್ ಜಿಪ್‌ನ ಪಟ್ಟಿಯಲ್ಲಿಟ್ಟು ಗಾಂಜಾ ಸಾಗಾಟ: ಓರ್ವ ವಶಕ್ಕೆ

ರಾಜ್ಯ

ಸುದ್ದಿ ಸಂಗ್ರಹ ಶಿವಮೊಗ್ಗ
ಜಿಲ್ಲೆಯ ಕೇಂದ್ರ ಕಾರಾಗೃಹದೊಳಗೆ ಮಾದಕ ವಸ್ತು ಕಳ್ಳಸಾಗಾಣೆ ಯತ್ನ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಂಧಿತನನ್ನು ನೋಡಲು ಬಂದಿದ್ದ ವ್ಯಕ್ತಿಯೋರ್ವ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಮಾದಕ ವಸ್ತು ಸಾಗಿಸಲು ಯತ್ನಿಸಿದ ಘಟನೆ ನಡೆದಿದೆ.

ಬಂಧಿತ ವ್ಯಕ್ತಿಯನ್ನು ಶಕೀಬ್ ಎಂದು ಗುರುತಿಸಲಾಗಿದೆ, ಕೈದಿ ಅಶೋಕ್ ಎಂಬಾತನನ್ನು ಭೇಟಿ ಮಾಡಲು ಬಂದಾಗ ಮಾದಕ ವಸ್ತು ಸಾಗಿಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಡಿ.9 ಮಂಗಳವಾರ ಸಂಜೆ ಕೈದಿ ಅಶೋಕ್‌ನನ್ನು ನೋಡಲು ಶಕೀಬ್ ಮಾರುತಿ ಸುಜುಕಿ ಕಾರಿನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ. ಈ ವೇಳೆ ಕರ್ತವ್ಯ ನಿರತರಾದ ಅಧಿಕಾರಿಗಳು ಸಂದರ್ಶಕ ಶಕೀಬ್ ಮತ್ತು ಬಂಧಿತನಿಗೆ ನೀಡಲು ತಂದಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತಪಾಸಣೆಗೊಳಪಡಿಸಿದರು. ಈ ಸಂದರ್ಭದಲ್ಲಿ ಆತ ತಂದಿದ್ದ ನಾಲ್ಕು ಜೀನ್ಸ್ ಪ್ಯಾಂಟ್‌ಗಳ ಸೊಂಟದ ಪಟ್ಟಿಯ ಒಳಗಡೆ ಹಾಗೂ ಜಿಪ್ ಪಟ್ಟಿಯಲ್ಲಿ ಗಾಂಜಾ ಪತ್ತೆಯಾಗಿದೆ.

ಗಾಂಜಾ ಪತ್ತೆಯಾದ ನಂತರ ಶಕೀಬ್‌ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ 9,910 ರೂ. ನಗದು ಹಣ ಪತ್ತೆಯಾಗಿದೆ. ನಂತರ ಭದ್ರತಾ ಸಿಬ್ಬಂದಿ ಗಾಂಜಾ, ನಗದು ಹಾಗೂ ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾರಾಗೃಹದೊಳಗೆ ಗಾಂಜಾ ಮತ್ತು ನಗದು ನಿಷೇಧಿತ ವಸ್ತುಗಳಾಗಿದ್ದು, ಇವುಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿದ ಸಂದರ್ಶಕ ಶಕೀಬ್, ಕೈದಿ ಅಶೋಕ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ ಅಧಿನಿಯಮ-2022) ಕಲಂಗಳ ಅಡಿಯಲ್ಲಿ ಮತ್ತು ಇತರೆ ಸೂಕ್ತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸರು ಕಟ್ಟೆಚ್ಚರ ಕ್ರಮ ಕೈಗೊಂಡಿದ್ದಾರೆ. ಆದರೂ ಕೂಡ ಕೇಂದ್ರ ಕಾರಾಗೃಹದೊಳಗೆ ಮಾದಕ ವಸ್ತುವಿನ ಕಳ್ಳಸಾಗಣೆ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿಂದೆ ಬಾಳೆದಿಂಡು ಮತ್ತು ಅಧಿಕಾರಿಯ ಒಳ ಉಡುಪಿನಲ್ಲಿ ಗಾಂಜಾ ಸಾಗಾಟ ಪ್ರಕರಣಗಳು ಬಯಲಿಗೆ ಬಂದಿತ್ತು.

Leave a Reply

Your email address will not be published. Required fields are marked *