ಚಿತ್ತಾಪುರ: ತಾಲೂಕು ಕೋಲಿ ಸಮಾಜದ ಸಂಘಟನೆ, ಒಗ್ಗಟ್ಟು, ಐಕ್ಯತೆಯಿಂದ ಸಮಾಜದ ಎಲ್ಲರೂ ಸಾಮೂಹಿಕವಾಗಿ ಸಮಾಜಪರ ಕೆಲಸ ಮಾಡುವ ಹಾಗೂ ಸಮಾಜದಲ್ಲಿ ಸಾಮರಸ್ಯೆ ಮೂಡಿಸುವ ದೃಷ್ಟಿಯಿಂದ ಅಧ್ಯಕ್ಷರ ಮೂರು ವರ್ಷದ ಅಧಿಕಾರ ಅವಧಿಯನ್ನು ಇಬ್ಬರು ಆಕಾಂಕ್ಷಿಗಳಿಗೆ ಹಂಚಿಕೆ ಮಾಡಲು ನಿರ್ಣಯಿಸಿ ಮೊದಲ 18 ತಿಂಗಳ ಅವಧಿಗಾಗಿ ಡೋಣಗಾಂವ ಗ್ರಾಮದ ನಿಂಗಣ್ಣಾ ದೇವಿಂದ್ರಪ್ಪಾ ಹೆಗಲೇರಿ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ 18 ತಿಂಗಳ ಅಧಿಕಾರ ಅವಧಿಯನ್ನು ಕಾಟಮ್ಮದೇವರಹಳ್ಳಿ ಗ್ರಾಮದ ಶಿವಕುಮಾರ ಸಿದ್ರಾಮಪ್ಪ ಯಾಗಾಪೂರ ಅವರಿಗೆಂದು ಈ ಮೂಲಕ ಘೋಷಿಸಲಾಗಿದೆ.
ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಮಾಡುವ ಕುರಿತು ಅರ್ಜಿ ಆಹ್ವಾನಿಸಲಾಗಿತ್ತು. ಐದು ಜನರು ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಅಧ್ಯಕ್ಷರ ಆಯ್ಕೆ ಕುರಿತು ಡಿಸೆಂಬರ್ 20 ರಂದು ಆಯೋಜಿಸಿದ್ದ ಕೋಲಿ ಸಮಾಜದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯ ಘೋಷಣೆ ಮಾಡಿದ್ದನ್ನು ಯಥಾರೀತಿ ಕಾಪಾಡಿಕೊಂಡು ಮೊದಲ ಅವಧಿಗೆ ನಿಂಗಣ್ಣಾ ಹೆಗಲೇರಿ ಅವರಿಗೆ ನೀಡಲಾಗಿದೆ. ನೂತನ ಅಧ್ಯಕ್ಷರು ತಕ್ಷಣ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಪ್ರವೃತ್ತರಾಗಿ ಸಮಾಜದ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ತಾಲೂಕು ಘಟಕದ ಪೂರ್ಣ ಪದಾಧಿಕಾರಿಗಳ ಘೋಷಣೆ ಮಾಡಬೇಕು ಎಂದು ಈ ಮೂಲಕ ಸೂಚಿಸಲಾಗಿದೆ.
ಚಿತ್ತಾಪೂರ ನಗರ ಘಟಕದ ಅಧ್ಯಕ್ಷ ಹುದ್ದೆಗೆ ಪಟ್ಟಣದ ಶ್ರೀ ಪ್ರಭು ಹಲಕರ್ಟಿ ಅವರು ಮಾತ್ರ ಅರ್ಜಿ ಸಲ್ಲಿಸಿದ್ದು ಪ್ರತಿಸ್ಪರ್ಧಿ ಆಕಾಂಕ್ಷಿಗಳಿಲ್ಲದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಈ ಮೂಲಕ ಘೋಷಿಸಲಾಗಿದೆ.
ತಾಲೂಕು ಘಟಕದ ಮತ್ತು ನಗರ ಘಟಕದ ಎಲ್ಲಾ ಪದಾಧಿಕಾರಿಗಳ ತಂಡದೊಂದಿಗೆ ಸಮಾಜಪರ ಕೆಲಸ ಮಾಡುತ್ತಾ ಸಮಾಜವನ್ನು ಸಂಘಟಿಸಬೇಕು. ಗ್ರಾಮೀಣ ಭಾಗದಲ್ಲಿ ಸಭೆ, ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜದ ಜನರಲ್ಲಿ ಅರಿವು ಜಾಗ್ರತೆ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಪ್ರಚಾರ ಕೆಲಸ ಮಾಡಬೇಕು. ಸಮಾಜಕ್ಕೆ ಸಾಮಾಜಿಕ ನ್ಯಾಯ, ಸಮಾಜದ ಜನರಿಗೆ ನ್ಯಾಯ ಕೊಡಿಸಲು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸದ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ, ಕೋಲಿ ಸಮಾಜದ ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರು, ರಾಮಲಿಂಗ ಬಾನ, ಸುರೇಶ ಬೆನಕನಳ್ಳಿ, ದೇವಿಂದ್ರ ಅರಣಕಲ್, ಭೀಮಣ್ಣಾ ಹೋತಿನಮಡಿ ಪತ್ರಿಕೆ ಹೇಳಿಕೆ ನೀಡಿದ್ದಾರೆ. .