ಸುದ್ದಿ ಸಂಗ್ರಹ ಬೆಳಗಾವಿ
ಸೋಮವಾರದಿಂದ ಬೆಳಗಾವಿ ಅಧಿವೇಶನ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಪ್ರತಿವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ.
ಬೆಳಗಾವಿಯಲ್ಲಿ ಈವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದ್ದು, ಒಟ್ಟು 170 ಕೋಟಿ ರೂ ವೆಚ್ಚ ಮಾಡಲಾಗಿದೆ. ಕಳೆದ ವರ್ಷ 15 ಕೋಟಿ ರೂ. ವೆಚ್ಚದಲ್ಲಿ ಅಧಿವೇಶನ ಮುಕ್ತಾಯಗೊಂಡಿತ್ತು. ಈ ಸಲದ 10 ದಿನದ ಬೆಳಗಾವಿ ಅಧಿವೇಶನಕ್ಕೆ 21 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಇದರಿಂದ ದೊಡ್ಡ ಮಟ್ಟದಲ್ಲಿ ಏನು ಪ್ರಯೋಜನ ಆಗುವುದಿಲ್ಲ ಎಂಬ ಅಭಿಪ್ರಾಯ ಇದೆ. ಆಡಳಿತ ವಿಪಕ್ಷಗಳು ಗಂಭೀರ ಸ್ವರೂಪದ ಚರ್ಚೆ ನಡೆಸುವ ಬದಲಾಗಿ ಕಾಲಹರಣದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂಬ ಆರೋಪಗಳು ಇವೆ.
ವಸತಿಗೆ 3,000 ಕೊಠಡಿಗಳು ಬುಕ್
ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿದ್ದು 6 ಸಾವಿರ ಪೊಲೀಸ್ ಸಿಬ್ಬಂದಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸುವರ್ಣ ಸೌಧದ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಇಷ್ಟೆಲ್ಲಾ ಖರ್ಚು ವೆಚ್ಚ ಮಾಡಿದರೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬುವುದು ಪ್ರತಿ ವರ್ಷ ಕೇಳಿ ಬರುತ್ತಿರುವ ಆರೋಪವಾಗಿದೆ. ನೆಪ ಮಾತ್ರಕ್ಕೆ ಎಂಬಂತೆ ಕೊನೆಯ 2 ದಿನಗಳ ಕಾಲ ಉತ್ತರ ಕರ್ನಾಟಕದ ಭಾಗದ ಚರ್ಚೆಗೆ ಸಮಯ ನೀಡಲಾಗುತ್ತದೆ. ಉಳಿದಂತೆ ಹೆಚ್ಚಿನ ಅವಧಿಯಲ್ಲಿ ಇತರ ಚರ್ಚೆಗಳು, ಗಲಾಟೆ, ಗದ್ದಲವೆ ಗಮನ ಸೆಳೆಯುತ್ತದೆ.
ಹೀಗಾಗಿ ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಒಟ್ಟು 84 ಸಂಘಟನೆಗಳು ಸಿದ್ಧತೆ ನಡೆಸಿಕೊಂಡಿವೆ. ಹೆಸರು ಕಾಳು, ಸೋಯಾಬಿನ್, ಬೆಳೆಗಳಿಗೆ ಪರಿಹಾರ ನೀಡುವಂತೆ ಬಿಜೆಪಿ ಸುವರ್ಣ ಸೌಧ ಮುತ್ತಿಗೆಗೆ ನಿರ್ಧಾರ ಮಾಡಿದೆ. ಕಬ್ಬು ಬೆಳೆಗಾರರ ವಿವಿಧ ಸಮಸ್ಯೆ ಇತ್ಯರ್ಥಕ್ಕೆ ರೈತರ ಬೃಹತ್ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದೆ.
ಇನ್ನು ಸರ್ಕಾರಿ ನೇಮಕಾತಿಗಾಗಿ ಆಗ್ರಹಿಸಿ ಯುವ ಸಮೂಹದಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪಂಚಮಸಾಲಿ ಸಮಾಜದಿಂದ ಮೌನ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದ್ದು ಇದನ್ನು ಸರ್ಕಾರ ಹೇಗೆ ಎದುರಿಸುತ್ತೆ ಕಾದು ನೋಡಬೇಕಿದೆ.