ರಾಷ್ಟ್ರದ ಅಭಿವೃದ್ಧಿಗೆ ತಂತ್ರಜ್ಞಾನವೆ ಚಾಲನಾ ಶಕ್ತಿ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಯಾವದೆ ಒಂದು ರಾಷ್ಟ್ರದ ಅಭಿವೃದ್ಧಿಯು, ಆ ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಯನ್ನು ಅವಲಂಬಿಸಿದೆ. ಅಮೇರಿಕಾ, ರಷ್ಯಾ, ಜಪಾನದಂತಹ ಮುಂದುವರೆದ ಮುಂತಾದ ರಾಷ್ಟ್ರಗಳು ಅಭಿವೃದ್ಧಿಯಾಗಿವೆಯೆಂದರೆ, ಅದು ಅಲ್ಲಿನ ತಂತ್ರಜ್ಞಾನದ ಬೆಳವಣಿಗೆ ಮತ್ತು ಅದರ ಅಳವಡಿಕೆಯಿಂದಾಗಿದೆ. ಹೀಗಾಗಿ ಯಾವುದೆ ಒಂದು ರಾಷ್ಟ್ರವು ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ತಂತ್ರಜ್ಞಾನವೇ ಚಾಲನಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ನಗರದ ಆಳಂದ ರಸ್ತೆಯ, ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ವತಿಯಿಂದ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೋಖ್ರಾನ್ ಅಣು ಪರೀಕ್ಷೆಯನ್ನು 1998ರ, ಮೇ-11ರಂದು ಯಶಸ್ವಿಯಾಗಿ ನೆರವೇರಿತು. ಅದರ ಸ್ಮರಣೆಗೋಸ್ಕರ ಈ ದಿನವನ್ನು ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನಿ, ತಂತ್ರಜ್ಞರನ್ನು ಗುರುತಿಸಿ ಗೌರವಿಸುವ ಮೂಲಕ, ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವು ಉದ್ದೇಶವಾಗಿದೆ. ನಮ್ಮ ದೇಶ ತಂತ್ರಜ್ಞಾನ ಅಳವಡಿಕೆಯಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತಿದೆ. ಇದು ಹೀಗೆ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ದೇಶ ವಿಶ್ವದ ಅಗ್ರಗಣ್ಯ ಸಾಲಿಗೆ ಸೇರುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವ್ಯಾಪಕ ಕಂಪ್ಯೂಟರ್‌ ಬಳಕೆಯಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಪ್ರತಿಯೊಂದು ದೇಶವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ. ಹಳೆಯ ತಂತ್ರಜ್ಞಾನ ಬಳಸಿಕೊಳ್ಳುವದರಿಂದ ಹಣ, ಸಮಯ, ಪರಿಶ್ರಮ ಎಲ್ಲವೂ ಹೆಚ್ಚಿಗೆ ಬೇಕಾಗುತ್ತದೆ. ನಮ್ಮ ದೇಶದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಹಾಗೂ ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *