ಸುದ್ದಿ ಸಂಗ್ರಹ ಹುಬ್ಬಳ್ಳಿ
ಸಿಪಿಐ ಪಿ.ವಿ ಸಾಲಿಮಠ ದಕ್ಷ ಮತ್ತು ಪ್ರಮಾಣಿಕ ಪೊಲೀಸ್ ಅಧಿಕಾರಿ ಅಂತ ಎಲ್ಲರಿಂದ ಮೆಚ್ಚುಗೆ ಪೆಡದಿದ್ದರು. ತಮ್ಮ ನಡೆ ನುಡಿಯಿಂದ ಇಲಾಖೆ ಮತ್ತು ಕೆಲಸ ಮಾಡಿದ ಸ್ಥಳದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ನಿನ್ನೆ ಕರ್ತವ್ಯ ಮುಗಿಸಿಕೊಂಡು, ಪತ್ನಿ ಮತ್ತು ಮಕ್ಕಳ್ನು ನೋಡಲು ಹೊರಟಿದ್ದರು. ಆದರೆ ರಸ್ತೆಯಲ್ಲಿ ಕಾದು ಕುಳಿತ ಜವರಾಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಕಾರು ಅಪಘಾತದಲ್ಲಿ ಸಿಪಿಐ ಸಾಲಿಮಠ ಸಜೀವವಾಗಿ ದಹನವಾಗಿದ್ದು, ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಕಳೆದ ರಾತ್ರಿ ಕಾರು ಅಪಘಾತವೊಂದು ಸಂಭವಿಸಿದೆ. ಅಪಘಾತದಲ್ಲಿ 44 ವರ್ಷದ ಸಿಪಿಐ ಪಿ.ವಿ ಸಾಲಿಮಠ ಸಜೀವವಾಗಿ ದಹನವಾಗಿದ್ದಾರೆ. ಹಾವೇರಿಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕಳೆದ 3 ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದ ಸಾಲಿಮಠ, ಇಂದು ಬೆಳಗಾವಿಯಲ್ಲಿ ಕೋರ್ಟ್ ಎವಿಡೆನ್ಸ್ಗೆ ಹೊರಟಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕೆಲಸ ಮುಗಿಸಿ, ಗದಗನಲ್ಲಿರುವ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಂಡು ಬೆಳಗಾವಿಗೆ ಹೋಗುತ್ತೆನೆ ಎಂದು ಹೇಳಿ ತಮ್ಮ ಸ್ವಂತ ಐ20 ಕಾರ್ನಲ್ಲಿ ಹೋಗಿದ್ದರಂತೆ. ಇನ್ನು ಅರ್ಧಗಂಟೆ ಪ್ರಯಾಣ ಮಾಡಿದ್ದರೆ ಗದಗ ತಲುಪುತ್ತಿದ್ದರು. ಆದರೆ ಸಂಜೆ 7.30ರ ಸಮಯದಲ್ಲಿ ನಡೆದ ಅಪಘಾತದಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ.
ಅಪಘಾತ ನಡೆದಿದ್ದು ಹೇಗೆ ?
ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್ಗೆ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿದ್ದ ರಸ್ತೆಗೆ ಕಾರ್ ಜಂಪ್ ಆಗಿದೆ. ತಾವು ಹೋಗುತ್ತಿದ್ದ ಮಾರ್ಗದ ಎದುರು ಬದಿಗಿನ ರಸ್ತೆಗೆ ಇಳಿದು ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಕಂಬನಿ ಮಿಡಿದ ಸಿಬ್ಬಂದಿ ಮತ್ತು ಸಹಪಾಠಿಗಳು
ಪಿ.ವಿ ಸಾಲಿಮಠ, 2003ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು. ಮೂಲತ ಬೆಳಗಾವಿ ಜಿಲ್ಲೆಯ ಮುರಗೋಡ್ ನಿವಾಸಿಯಾಗಿದ್ದರು. ಆದರೆ ಅವರು ಹೆಚ್ಚು ಕೆಲಸ ನಿರ್ವಹಿಸಿದ್ದು ಕಲಬುರಗಿ ಜಿಲ್ಲೆಯಲ್ಲಿ. ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ, ಸೇಡಂ ಮತ್ತು ಚಿತ್ತಾಪುರ ಇನ್ಸಪೆಕ್ಟರ್ ಆಗಿ, ನಂತರ ಗದಗ ಶಹರ ಠಾಣೆ ಇನ್ಸಪೆಕ್ಟರ್ ಆಗಿದ್ದರು. ಬೈಲಹೊಂಗಲ ಇನ್ಸಪೆಕ್ಟರ್ ಆಗಿದ್ದ ಅವರಿಗೆ ಮೂರು ತಿಂಗಳ ಹಿಂದಷ್ಟೆ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು.
ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ತಮ್ಮ ಕೆಲಸ ಮತ್ತು ಗುಣಗಳಿಂದ ಸರ್ವರ ಮೆಚ್ಚುಗೆ ಗಳಿಸಿದ್ದರು. ಪಿ.ವಿ ಸಾಲಿಮಠ ಪತ್ನಿ ಮತ್ತು ಎರಡು ಮಕ್ಕಳು ಗದಗನಲ್ಲಿ ವಾಸವಾಗಿದ್ದರಿಂದ ಆಗಾಗ ಗದಗಿಗೆ ಹೋಗಿ ಬರ್ತಿದ್ದ ಸಾಲಿಮಠ, ನಿನ್ನೆ ಪತ್ನಿ ಮತ್ತು ಮಕ್ಕಳನ್ನು ನೋಡಲಿಕ್ಕೆ ಹೋಗುವಾಗಲೆ ಬಾರದ ಲೋಕಕ್ಕೆ ಹೋಗಿದ್ದಾರೆ.
ಸಾಲಿಮಠ ಸಾವಿನ ಸುದ್ದಿ ಕೇಳಿ, ಅನೇಕ ಕಡೆಗಳಿಂದ ಅವರ ಅಭಿಮಾನಿಗಳು, ಸಹಪಾಠಿ ಮತ್ತು ಸಿಬ್ಬಂದಿಗಳು ಆಗಮಿಸಿದ್ದರು. ಹುಬ್ಬಳ್ಳಿ ಕಿಮ್ಸ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕಿಮ್ಸ್ನಲ್ಲಿಯೇ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಪ್ರಾರ್ಥಿವ ಶರೀರಿಕ್ಕೆ ಅಂತಿನ ನಮನ ಸಲ್ಲಿಸಿದರು. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಧಾರವಾಡ ಎಸ್ಪಿ ಗುಂಜನ್ ಆರ್ಯ, ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಹುಬ್ಬಳ್ಳಿಯಿಂದ ಆಂಬುಲೆನ್ಸ್ನಲ್ಲಿ ಪ್ರಾರ್ಥಿವ ಶರೀರ ತೆಗೆದುಕೊಂಡು ಧಾರವಾಡ ಮಾರ್ಗವಾಗಿ ಅವರ ಸ್ವಗ್ರಾಮ ಮುರಗೋಡ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಮಾರ್ಗಮಧ್ಯದಲ್ಲಿ ಅನೇಕ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಪ್ರಾರ್ಥಿವ ಶರೀರದ ದರ್ಶನ ಪಡೆದರು. ಹುಟ್ಟುರಲ್ಲಿ ಇಂದು ಅಂತ್ಯಕ್ರಿಯೆ ನಡೆಯಿತು.
ಸದ್ಯ ಪಿ.ವಿ ಸಾಲಿಮಠ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ ಘಟನೆ ನಡೆದ ಬಗ್ಗೆ ಪ್ರತ್ಯೇಕ್ಷ ಸಾಕ್ಷಿಗಳು ಇಲ್ಲದೆ ಇರುವುದರಿಂದ ಅಪಘಾತಕ್ಕೆ ನಿಖರವಾದ ಕಾರಣ ಇನ್ನುವರಗೆ ತಿಳಿದು ಬಂದಿಲ್ಲ. ಕಾರಣ ಏನೆ ಇದ್ದರು ತಮ್ಮ ಕೆಲಸ ಮತ್ತು ನಡೆನುಡಿಯಿಂದ ಇಲಾಖೆ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಸಿಪಿಐ ಪಿ.ವಿ ಸಾಲಿಮಠ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೆ ಸರಿ.