ಸುದ್ದಿ ಸಂಗ್ರಹ ಶಹಾಬಾದ್
ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಶಿಕ್ಷಣದ ಮಹತ್ತರ ಉದ್ದೇಶವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ನಗರದ ಇಂಗಿನಶೆಟ್ಟಿ ಸಭಾಗೃಹದಲ್ಲಿ ನಡೆದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟ ಶಾಲೆ, ನಂದಗೋಕುಲ ಶಾಲೆ, ವಿಜಯ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಹಬ್ಬ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕಲಾಸಕ್ತಿ ಹೊರಹಾಕಲು ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಇಮ್ಮಡಿಯಾಗಿ ಸಾಧನೆ ಮಾಡುತ್ತಾರೆ. ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗದೆ, ವಿದ್ಯಾರ್ಥಿಗಳು ಆ ಮಿತಿ ದಾಟಿ ಜ್ಞಾನಕ್ಕಾಗಿ ಓದುವ ನಿಟ್ಟಿನಲ್ಲಿ ಬೆಳೆಯಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ನಾಗೇಂದ್ರ ಬೇಲೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಯ ವಿದ್ಯೆ ಕಲಿಕೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಅಡಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಮಕ್ಕಳಿಗೆ ವಿವಿಧ ಸ್ಪರ್ಧೆಯ ಮೂಲಕ ಚಿಣ್ಣರ ಹಬ್ಬ ಆಯೋಜಿಸಿ, ಕಲಿಕೆಯೊಂದಿಗೆ ಅವರಲ್ಲಿ ಹುದುಗಿರುವ ಪ್ರತಿಭೆ ಹೊರತರಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಶಿವಪುತ್ರ ಕರಣಿಕ, ಸಮೂಹ ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ ವಿಶ್ವಕರ್ಮ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕೇವಲ ಪಠ್ಯಗಳ ಜೊತೆಗೆ ವಿದ್ಯಾರ್ಜನೆ ಮಾಡದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೇರೇಪಿಸಬೇಕು. ಹೀಗಾದಾಗ ಮಾತ್ರ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಡಾ.ಅಹ್ಮದ ಪಟೇಲ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಅಣವೀರ ಇಂಗಿನಶೆಟ್ಟಿ ವಹಿಸಿದರು.
ಅಡತ ಮತ್ತು ದಾಲ್‌ಮಿಲ್ ಸಂಘದ ಅಧ್ಯಕ್ಷ ಪ್ರಶಾಂತ ಮರಗೋಳ, ಎಪಿಎಮ್‌ಸಿ ಸದಸ್ಯ ವಿಶ್ವರಾಧ್ಯ ಬಿರಾಳ, ಉದ್ಯಮಿಗಳಾದ ಶಿವಕುಮಾರ ಇಂಗಿನಶೆಟ್ಟಿ, ಅನಿಲ ಜಾನ್, ಬ್ರಹ್ಮಕುಮಾರಿ ಜಯಶ್ರೀ ಅಕ್ಕಾ, ಸಮಾಜ ಸೇವಕಿ ವಿಜಯಲಕ್ಷ್ಮಿ ಇಂಗಿನಶೆಟ್ಟಿ, ಯೋಗ ಶಿಕ್ಷಕ ಮೋಹನ ಘಂಟ್ಲಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ವಿಜ್ಞಾನ, ಗಣಿತ, ಚಿಂತನಾ ಪರೀಕ್ಷೆಯಲ್ಲಿ ತಾಲೂಕ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ನಾನಾ ಸ್ಪರ್ಧೆಯಲ್ಲಿ ವಿಜೇತರಾದಿ ವಿದ್ಯಾರ್ಥಿಗಳಿಗೆ ಹಾಗೂ
ಪೋಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪುಟಾಣಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನಸೂರೆಗೊಳಿಸಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿಯಾರಾದ ಕಾಳಿಕಾ ಪಾಟೀಲ್, ಸುಧಾರಾಣಿ ಚವ್ಹಾಣ್ ನಿರೂಪಿಸಿದರು, ಮಲಮ್ಮ ಮೀರಾಸ್ಕರ ಸ್ವಾಗತಿಸಿದರು, ಸವಿತಾ ಬೆಳಗುಂಪಿ ವರದಿ ವಾಚಿಸಿದರು. ಅಂಬಿಕಾ ಜಿಂಗಾಡೆ ವಂದಿಸಿದರು.