ನವದೆಹಲಿ: ವಿಮಾನ ಟಿಕೆಟ್ ಕಾಯ್ದಿರಿಸಿದ 48 ಗಂಟೆಯೊಳಗೆ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಪ್ರಯಾಣಿಕರಿಗೆ ಅವಕಾಶ ನೀಡಲು ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಿರ್ಧರಿಸಿದೆ.
ಟಿಕೆಟ್ ಮರುಪಾವತಿ ಮಾನದಂಡಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಡಿಜಿಸಿಎ ಪ್ರಸ್ತಾಪಿಸಿದೆ. ಇದಲ್ಲದೆ, ಟ್ರಾವೆಲ್ ಏಜೆಂಟ್ ಅಥವಾ ಪೋರ್ಟಲ್ ಮೂಲಕ ಟಿಕೆಟ್ ಖರೀದಿಸಿದರೆ, ಏಜೆಂಟರು ನೇಮಕಗೊಂಡ ಪ್ರತಿನಿಧಿಗಳಾಗಿರುವುದರಿಂದ ಮರುಪಾವತಿ ಜವಾಬ್ದಾರಿ ವಿಮಾನಯಾನ ಸಂಸ್ಥೆಗಳ ಮೇಲಿರುತ್ತದೆ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.
ವಿಮಾನಯಾನ ಸಂಸ್ಥೆಗಳು 21 ಕೆಲಸದ ದಿನಗಳಲ್ಲಿ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರ ಜೊತೆಗೆ ಪ್ರಯಾಣಿಕರ ಹೆಸರು ನಮೂದಿಸುವಾಗ ತಪ್ಪಾಗಿದ್ದರೆ ಪ್ರಯಾಣಕ್ಕೂ 24 ಗಂಟೆಗಳ ಮೊದಲು ಅದನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಕರಡಿನಲ್ಲಿ ಹೇಳಲಾಗಿದೆ.