ಆಹಾರ ಪ್ರತಿಯೊಂದು ಜೀವಿಯ ಅಮೃತ: ಚಂದ್ರಶ್ಯಾ ಇಟಗಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಪ್ರತಿಯೊಂದು ಜೀವಿಗೆ ಆಹಾರ ಅಮೃತವಿದ್ದಂತೆ ಎಂದು ಪ್ರಗತಿಪರ, ಸಾವಯುವ ರೈತ ಚಂದ್ರಶ್ಯಾ ಇಟಗಿ ಅಭಿಪ್ರಾಯಪಟ್ಟರು.

ಆಳಂದ ರಸ್ತೆಯ ಟೋಲಗೇಟ್ ಸಮೀಪದ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಆಹಾರ ದಿನಾಚರಣೆ’ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಮಾನವ ಸೇರಿ ಎಲ್ಲಾ ಜೀವಿಗಳಿಗೆ ಆಹಾರ ಅವಶ್ಯಕ. ಪ್ರತಿಯೊಬ್ಬ ಮನುಷ್ಯನಿಗೆ ಸದೃಢ ಮತ್ತು ಪೌಷ್ಠಿಕ ಆಹಾರ ದೊರೆಯಬೇಕು. ಆಹಾರ ಉತ್ಪಾದನೆಯ ಕಷ್ಟ ರೈತನಿಗೆ ಗೊತ್ತು. ಆಹಾರವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೆ, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಜಗತ್ತಿನ ಪ್ರತಿಯೊಂದು ರಾಷ್ಟ್ರವು ಆಹಾರ ಲಭಿಸುವಿಕೆಯನ್ನು ಸಾಂವಿಧಾನಿಕ ಹಕ್ಕನಾಗಿಸಬೇಕು. ರೈತರು ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರೆಯಬೇಕು. ಪ್ರತಿಯೊಬ್ಬರಿಗೂ ಆಹಾರ ದೊರೆಯುವುದು ಖಾತರಿ ಮಾಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.

ನಾವು ಸೇವಿಸುವ ಆಹಾರವು ರಾಸಾಯನಿಕಗಳಿಂದ ಕೂಡಿದೆ. ಇದರಿಂದ ಅನೇಕ ಕಾಯಿಲೆಗಳು ಬಂದಿರುತ್ತಿವೆ . ಶುಚಿಯಾದ, ಸತ್ವಯುತ ಮತ್ತು ಸಮತೋಲಿತ ಆಹಾರ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಾಗುತ್ತದೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಪ್ರತಿದಿನಕ್ಕೆ ಸರಾಸರಿ ಒಬ್ಬ ವ್ಯಕ್ತಿಯಿಂದ 137 ಗ್ರಾಮ್ಸ್, ವರ್ಷಕ್ಕೆ 50 ಕೆಜಿ ಮತ್ತು ದೇಶದಲ್ಲಿ 78.2 ಮಿಲಿಯನ್ ಟನ್ಸ್ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಜನಸಂಖ್ಯೆಯ ಶೇ.14.37 ರಷ್ಟು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಅವಶ್ಯಕತೆಯಷ್ಟೆ ಆಹಾರ ಬಳಸಿ, ಯಾವುದೆ ಕಾರಣದಿಂದಲೂ ವ್ಯರ್ಥವಾಗದಂತೆ ಜಾಗೃತಿ ವಹಿಸುವ ‘ಆಹಾರ ಸಂಸ್ಕೃತಿ’ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಅಸ್ಲಾಂ ಶೇಖ್, ರೈತರಾದ ಶರಣಬಸಪ್ಪ ಇಟಗಿ, ಶ್ರೀಶೈಲ್ ಕಲಬುರ್ಗಿ, ಶಿವಶರಣ ಕಾರಬಾರಿ, ಮಲ್ಲಿಕಾರ್ಜುನ ಬಿ.ಇಟಗಿ, ಮಲ್ಲಿಕಾರ್ಜುನ ಜಿ.ಇಟಗಿ, ರಾಜು ಕಮ್ಮನ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *