ಪಾಟ್ನಾ: ಬಿಹಾರ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಇಂದು ಬೇಗುಸರೈಯ ಹಳ್ಳಿಯ ಕೊಳದಲ್ಲಿ ಮೀನು ಹಿಡಿದು ಸುದ್ದಿಯಾಗಿದ್ದಾರೆ.
ತಮ್ಮ ಭಾಷಣವನ್ನು ಮುಗಿಸಿದ ನಂತರ ರಾಹುಲ್ ಸುಮಾರು 3 ಕಿ.ಮೀ. ದೂರ ಪ್ರಯಾಣ ಬೆಳೆಸಿ, ಬೇಗುಸರೈ ವಿಧಾನಸಭಾ ಕ್ಷೇತ್ರದ ಭರ್ರಾ ಗ್ರಾಮಕ್ಕೆ ತೆರಳಿದರು.
ಕೊಳ ತಲುಪಿದ ರಾಹುಲ್ ಬಲೆ ಬೀಸುತ್ತಿರುವ ಮೀನುಗಾರರನ್ನು ಭೇಟಿ ಮಾಡಲು ಸಣ್ಣ ದೋಣಿ ಹತ್ತಿದರು. ಈ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ನೀರಿಗೆ ಹಾರಿದಾಗ ರಾಹುಲ್ ಹಾರಿದರು. ಈ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ನೀರಿನಲ್ಲಿ ಮೀನುಗಾರರೊಂದಿಗೆ ನಗುತ್ತಾ ಮತ್ತು ಮಾತನಾಡುತ್ತಿದ್ದಾಗ ಎಸ್‌ಪಿಜಿ ಸಿಬ್ಬಂದಿ ಕೂಡ ಅವರಿಗೆ ಭದ್ರತೆ ನೀಡಲು ನೀರಿಗೆ ಧುಮಿಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೇಗುಸರೈ ಕಾಂಗ್ರೆಸ್ ಅಭ್ಯರ್ಥಿ ಅಮಿತಾ ಭೂಷಣ್ ಇದು ಪೂರ್ವ ನಿಗದಿತ ಕಾರ್ಯಕ್ರಮ ಆಗಿರಲಿಲ್ಲ. ರಾಹುಲ್ ಅವರು ತಮ್ಮ ಭಾಷಣ ಮುಗಿಸಿದ ನಂತರ ಹತ್ತಿರದ ಕೆಲವು ಮೀನುಗಾರರ ಬಗ್ಗೆ ತಿಳಿಯುವ ಕುತೂಹಲ ಇತ್ತು ಎಂದು ತಿಳಿಸಿದರು.
ಕೊಳದಲ್ಲಿ ರಾಹುಲ್ ತಮ್ಮ ಈಜು ಕೌಶಲ್ಯವನ್ನು ಪ್ರದರ್ಶಿಸಿದ್ದಲ್ಲದೆ, ಸ್ಥಳೀಯರೊಂದಿಗೆ ಮೀನುಗಾರಿಕಾ ಬಲೆಗಳನ್ನು ಎಳೆಯಲು ಸಹ ಸಹಾಯ ಮಾಡಿದರು. ಈಜಾಡಿದ ಬಳಿಕ ರಾಹುಲ್ ಗಾಂಧಿ ಹತ್ತಿರದಲ್ಲಿದ್ದ ಮಹಾದೇವ್ ಸಾಹ್ ಅವರ ಮನೆಗೆ ತೆರಳಿದರು. ಅಲ್ಲಿ ಅವರು ತೆರೆದ ಸ್ನಾನಗೃಹದಲ್ಲಿರುವ ಕೈಪಂಪ್‌ನಲ್ಲಿ ಸ್ನಾನ ಮಾಡಿ ಒಂದು ಕೋಣೆಯೊಳಗೆ ಹೋಗಿ ಬಟ್ಟೆ ಬದಲಾಯಿಸಿದರು.