ಮುಂಬೈ: ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 11 ಜನ ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ರೈಲ್ವೆ ವಿಭಾಗೀಯ ಆಯುಕ್ತ ಪ್ರವೀಣ್ ಗೆದಮ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ದಾಟುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಪ್ರಯಾಣಿಕರಲ್ಲಿ ಭೀತಿ ಮೂಡಿಸಿತು. ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಪ್ರಯಾಣಿಕರು ಇಳಿದು ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಟ್ರ್ಯಾಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರ ಮೇಲೆ ಹರಿದಿದೆ. ಪರಿಣಾಮವಾಗಿ 11 ಮಂದಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ 11 ಜನ ಸಾವಿಗೀಡಾಗಿದ್ದು, 5 ಜನರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. 8 ಅಂಬುಲೆನ್ಸ್‌ಗಳು ಮತ್ತು ಹಲವಾರು ರೈಲ್ವೆ ರಕ್ಷಣಾ ವ್ಯಾನ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಡಿಆರ್‌ಎಂ ಸಂಪರ್ಕದಲ್ಲಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಪ್ರವೀಣ್ ಗೆದಮ್ ವಿವರಿಸಿದ್ದಾರೆ.
ನಮ್ಮ ಪ್ರಾಥಮಿಕ ಮಾಹಿತಿಯ ಪ್ರಕಾರ ಪುಷ್ಪಕ್ ಎಕ್ಸ್‌ಪ್ರೆಸ್‌ನ ಒಂದು ಬೋಗಿಯೊಳಗೆ ‘ಹಾಟ್ ಆಕ್ಸಲ್’ ಅಥವಾ ‘ಬ್ರೇಕ್-ಬೈಂಡಿಂಗ್’ (ಜಾಮಿಂಗ್)ನಿಂದಾಗಿ ಕಿಡಿ ಹೊತ್ತಿರುವುದು ಕಂಡುಬಂದಿದೆ. ಇದರಿಂದ ಕೆಲವು ಪ್ರಯಾಣಿಕರು ಭಯಭೀತರಾದರು. ಅವರು ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಕೆಲವರು ಹಳಿಗಳ ಮೇಲೆ ಹಾರಿದ್ದಾರೆ. ಅದೆ ಸಮಯದಲ್ಲಿ, ಕರ್ನಾಟಕ ಎಕ್ಸ್‌ಪ್ರೆಸ್ ಪಕ್ಕದ ಹಳಿಯಲ್ಲಿ ಹಾದುಹೋಗುತ್ತಿತ್ತು. ಆಗ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ಪಡೆದುಕೊಂಡಿದ್ದಾರೆ. ಜಲ್ಗಾಂವ್ ಜಿಲ್ಲೆಯ ಪರ್ಧಡೆ ರೈಲು ನಿಲ್ದಾಣದ ಬಳಿ ಸಂಜೆ ಸಂಭವಿಸಿದ ಅಪಘಾತದ ಬಗ್ಗೆ ಆಡಳಿತದಿಂದ ನನಗೆ ಮಾಹಿತಿ ಬಂದಿದೆ. ಬೆಂಕಿಯ ವದಂತಿಯಿಂದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಪಕ್ಕದ ಹಳಿಗೆ ಹಾರಿದಾಗ ಅಪಘಾತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ಮತ್ತು ಅವರ ರಕ್ಷಣಾ ತಂಡಗಳು ಸಹ ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ನೀಡಲು ಸಂಬಂಧಪಟ್ಟ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.